ಡಿ.ಕೆ.ಶಿವಕುಮಾರ್ ಅವರೇ ಭ್ರಷ್ಟಾಚಾರದ ಪಿತಾಮಹ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

| Published : Aug 03 2024, 01:30 AM IST / Updated: Aug 03 2024, 04:53 AM IST

ಸಾರಾಂಶ

‘ಡಿ.ಕೆ.ಶಿವಕುಮಾರ್ ಅವರೇ ಭ್ರಷ್ಟಾಚಾರದ ಪಿತಾಮಹ. ಅವರೇನು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

 ಬೆಂಗಳೂರು :  ‘ಡಿ.ಕೆ.ಶಿವಕುಮಾರ್ ಅವರೇ ಭ್ರಷ್ಟಾಚಾರದ ಪಿತಾಮಹ. ಅವರೇನು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

‘ವಿಜಯೇಂದ್ರ ಮಾಡಿದ ಹಗರಣಗಳನ್ನು ಬಿಚ್ಚಿಡುತ್ತೇನೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತಿಗೆ ಶುಕ್ರವಾರ ಸುದ್ದಿಗಾರರ ಮೂಲಕ ತಿರುಗೇಟು ನೀಡಿದ ಅವರು, ಶಿವಕುಮಾರ್ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರ ಬಳಿ ಭ್ರಷ್ಟಾಚಾರದ ಬಗ್ಗೆ ಹೇಳಿಸಿಕೊಳ್ಳುವ ದಿನಗಳು ಬಂದಿಲ್ಲ. ಅವರ ಕತೆ ಏನಾಗಿದೆ ಎನ್ನುವುದು ಗೊತ್ತಿದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ಲೇವಡಿ ಮಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಭರವಸೆ ನೀಡಿ, ಜನರ ಕಿವಿಗೆ ಹೂ ಮುಡಿಸಿದವರ ಪಶ್ಚಾತ್ತಾಪದ ಯಾತ್ರೆ ಇದು. ನಮ್ಮ ಯಾತ್ರೆ ಯಶಸ್ವಿಯಾಗಲಿ ಎಂದು ಒಂದು ದಿನ ಮುಂಚಿತವಾಗಿ ಈ ಆಂದೋಲನ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಸರ್ಕಾರದ ಹಗರಣಗಳ ಬಗ್ಗೆ ಉತ್ತರ ಕೊಡಬೇಕಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ ಸರ್ಕಾರ ರಾಜ್ಯದ ಜನರಿಗೆ ಶಾಪವಾಗಿದೆ. ನಾವು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ತೊಡೆ ತಟ್ಟಿದ್ದೇವೆ. ಅವರು ಉತ್ತರ ಕೊಡಲಿ ಎಂದರು.ಕಾಂಗ್ರೆಸ್ಸಿನ ಪೋಸ್ಟರ್ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಪೇಸಿಎಂ, 40% ಆರೋಪ ಮಾಡಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಎಂದು ತೀಕ್ಷ್ಣವಾಗಿ ಹೇಳಿದರು.