ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌ - ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸಂಪುಟ ಅಸ್ತು

| Published : Nov 29 2024, 09:59 AM IST

thawar chand gehlot

ಸಾರಾಂಶ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನವನ್ನು ರಾಜ್ಯಪಾಲರಿಂದ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನವನ್ನು ರಾಜ್ಯಪಾಲರಿಂದ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಟ್ಟು 8 ವಿಧೇಯಕಗಳನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಿದ್ದು, ಇದರಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024ಕ್ಕೆ ಸಹ ಸರ್ಕಾರ ಅಂಗೀಕಾರ ಪಡೆದಿದೆ.

ಇದರಡಿ ವಿಧೇಯಕದ ತಿದ್ದುಪಡಿ ಮೂಲಕ ಗದಗದ ಗ್ರಾಮೀಣಾಭೀವೃದ್ಧಿ ವಿಶ್ವವಿದ್ಯಾಲಯದ ಕುಲಾಧಿಪತಿಗಳನ್ನಾಗಿ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ. ಈ ತಿದ್ದುಪಡಿ ವಿಧೇಯಕವನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಿದ್ದು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗುವುದು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ಮತ್ತಷ್ಟು ಸಕ್ರಿಯವಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸಲು ಈ ತೀರ್ಮಾನ ಮಾಡಲಾಗಿದೆ. ಗುಜರಾತ್‌ನಲ್ಲೂ ಈ ಮಾದರಿ ಅನುಸರಿಸಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಇನ್ನು ಮುಂದೆ ಕುಲಾಧಿಪತಿಗಳ ಎಲ್ಲಾ ನಿರ್ಣಯಗಳನ್ನು ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯವರು ನಿರ್ವಹಿಸುತ್ತಾರೆ ಎಂದು ಹೇಳಿದರು.

ಈ ವಿಧೇಯಕಕ್ಕೂ ರಾಜ್ಯಪಾಲರ ಅಂಗೀಕಾರ ಬೇಕೆ? ಎಂಬ ಪ್ರಶ್ನೆಗೆ, ಇದಲ್ಲ ಯಾವುದೇ ವಿಧೇಯಕ ಮಂಡಿಸಿದರೂ ರಾಜ್ಯಪಾಲರ ಅಂಗೀಕಾರ ಬೇಕಾಗುತ್ತದೆ. ಇದನ್ನೂ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸುತ್ತೇವೆ. ಮುಂದೆ ನೋಡೋಣ ಎಂದು ಉತ್ತರಿಸಿದರು.

ಚಾಣಕ್ಯ ವಿವಿ ನಿಯಮ ತಿದ್ದುಪಡಿ:

ಚಾಣಕ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024 ಮಂಡನೆಗೂ ನಿರ್ಧಾರ ಮಾಡಲಾಗಿದೆ. ಈವರೆಗೆ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಪ್ರತಿನಿಧಿ ಒಬ್ಬರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿತ್ತು. ಇದ್ದನ್ನು ತಿದ್ದುಪಡಿ ಮಾಡಿ ಚಾಣಕ್ಯ ವಿವಿಗೂ ಸರ್ಕಾರದ ಪ್ರತಿನಿಧಿ ನೇಮಿಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಹೆಚ್ಚಳ:

ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿರುವ ವಂತಿಗೆಯನ್ನು ಹೆಚ್ಚಿಸುವ ಸಂಬಂಧ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024ನ್ನು ಮಂಡಿಸಲು ನಿರ್ಧರಿಸಲಾಗಿದೆ. ಸದ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ ವಾರ್ಷಿಕ ₹20, ಮಾಲೀಕರಿಂದ ₹40 ಹಾಗೂ ಸರ್ಕಾರದಿಂದ ₹20 ವಂತಿಗೆ ನೀಡಲಾಗುತ್ತಿತ್ತು. ಅದನ್ನು ಹೆಚ್ಚಿಸಿ ಕಾರ್ಮಿಕರಿಂದ ಮತ್ತು ಸರ್ಕಾರದಿಂದ ತಲಾ ₹50 ಹಾಗೂ ಮಾಲೀಕರಿಂದ ₹100 ಸಂಗ್ರಹಿಸುವ ಕುರಿತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ಅದನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಈ ತಿದ್ದುಪಡಿಯಿಂದ ಸರ್ಕಾರಕ್ಕೆ ₹15.81 ಕೋಟಿ ಹೆಚ್ಚುವರಿ ವೆಚ್ಚವಾಗಲಿದ್ದು, ಕಲ್ಯಾಣ ನಿಧಿ ಸಂಗ್ರಹ ₹200 ಕೋಟಿಗಳಷ್ಟಾಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

12 ಕಡೆ ರೋಪ್‌ವೇ, ರೋಪ್‌ವೇಗಾಗಿ ವಿಧೇಯಕ

ರಾಜ್ಯದ ಪ್ರವಾಸಿ ತಾಣಗಳಲ್ಲಿ ರೋಪ್‌ ವೇ ಅಭಿವೃದ್ಧಿ ಮಾಡುವ ಕುರಿತಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರೋಪ್‌ ವೇ ವಿಧೇಯಕ 2024ನ್ನು ಮಂಡಿಸಲು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಯಿತು.

ಪ್ರಸ್ತುತ 12 ಕಡೆ ರೋಪ್‌ವೇ ಮಾಡಲು ನಿರ್ಧರಿಸಲಾಗಿದ್ದು, ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಕಾಮಗಾರಿ ಶುರುವಾಗಿದೆ. ಕೊಡಚಾದ್ರಿ ಬೆಟ್ಟ, ಅಂಜನಾದ್ರಿ, ಯಾದಗಿರಿ ಬೆಟ್ಟ, ಯಲ್ಲಮ್ಮನ ಗುಡ್ಡ, ಸವದತ್ತಿ ಸೇರಿದಂತೆ ಒಟ್ಟು 11 ಕಡೆ ಸಮೀಕ್ಷೆ ನಡೆಯುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಸ್ವತ್ತಿನ ಕುರಿತ ಮಾಹಿತಿಯನ್ನು ಸ್ವಯಂ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಿಬಿಎಂಪಿ (ಎರಡನೇ ತಿದ್ದುಪಡಿ) ವಿಧೇಯಕ 2024, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಪ್ರಾಧಿಕಾರ ರಚನೆಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ 2024 ಸೇರಿದಂತೆ ವಿವಿಧ ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಲಾಗಿದೆ.

ಕೊಳವೆಬಾವಿ ತೆಗೆದು ಮುಚ್ಚದಿದ್ದರೆ ಜೈಲು

ಕೊಳವೆಬಾವಿ ಕೊರೆದು ಸೂಕ್ತ ರೀತಿಯಲ್ಲಿ ಮುಚ್ಚದ ಕಾರಣದಿಂದ ಉಂಟಾಗುತ್ತಿರುವ ಅವಘಡವನ್ನು ತಪ್ಪಿಸಲು ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ, ನಿವರ್ಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024 ಮಂಡನೆಗೆ ಸಂಪುಟದಲ್ಲಿ ನಿರ್ಧರಿಸಲಾಘಿದೆ.

ಇದರಡಿ ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡ ಕೊಳವೆಬಾವಿಯನ್ನು ಮುಚ್ಚದಿದ್ದರೆ ಅಂತಹವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸುವುದು ಹಾಗೂ ಕೊಳವೆಬಾವಿ ಕೊರೆದ ಸಂಸ್ಥೆಯ ಮಾಲೀಕರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸುವ ನಿಯಮವನ್ನು ಸೇರಿಸಲಾಗುವುದು. ಜತೆಗೆ ಅನುಮತಿ ಇಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸುವವರಿಗೆ ₹5 ಸಾವಿರ ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅಂಶಗಳನ್ನು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.