ಮುಂಬರುವ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

- ಸ್ವಂತ ಬಲದಲ್ಲಿ ಅಧಿಕಾರ ಕಾರ್ಯಕರ್ತರ ಅಪೇಕ್ಷೆ ಎಂದಿದ್ದೆ

- ದೇವೇಗೌಡರ ಬಗ್ಗೆ ಗೌರವವಿದೆ, ಯಾವುದೇ ಗೊಂದಲವಿಲ್ಲ

--

ಬಿವೈವಿ ಒಗ್ಗಟ್ಟಿನ ಮಂತ್ರ- ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ದೋಸ್ತಿ ಇಲ್ಲ ಎಂದಿದ್ದ ದೇವೇಗೌಡ

- ಹೀಗಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಒಡಕು ಮೂಡಿದೆ ಎಂಬ ಸಂದೇಶ ರವಾನೆ ಅಗಿತ್ತು

- ಇದರ ಬೆನ್ನಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ- ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಇರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆ

- ಈ ನಿಟ್ಟಿನಲ್ಲಿ ನಡ್ಡಾ, ಅಮಿತ್‌ ಶಾ, ಜಿ.ಟಿ. ದೇವೇಗೌಡರು ತೀರ್ಮಾನಿಸಿದ್ದಾರೆ ಎಂದ ಬಿವೈವಿ==ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ದೋಸ್ತಿ ಇಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿ ನಡೆಸಿ ಬಿ.ವೈ.ವಿಜಯೇಂದ್ರ ಮಾತನಾಡಿದರು.

ಮಾಜಿ ಪ್ರಧಾನಿ, ಮುತ್ಸದ್ಧಿ ಎಚ್‌.ಡಿ.ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಅವರು ಎನ್‌ಡಿಎ ಪಾಲುದಾರ ಆಗಿದ್ದಾರೆ. ನನ್ನ ಬಗ್ಗೆಯೂ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಾರೆ. ರಾಜ್ಯದಲ್ಲಿ 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಿತ್ತು. 2018ರಲ್ಲಿ 104 ಸ್ಥಾನ ಗೆದ್ದಿತ್ತು. ಪ್ರತಿ ಬಾರಿ ಸ್ಪಷ್ಟ ಬಹುಮತಕ್ಕೆ 5-10 ಸ್ಥಾನ ವಂಚಿತರಾಗಿದ್ದೇವೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದು ಪಕ್ಷದ ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂಬುದನ್ನು ಪ್ರಸ್ತಾಪಿಸಿದ್ದೆ ಎಂದರು.

ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಮಾತು:

ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಸ್ಪಷ್ಟ ಬಹುಮತ ಪಡೆಯಲು ಯಶಸ್ವಿಯಾಗಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಸಹಜವಾಗಿ ಕಾರ್ಯಕರ್ತರಲ್ಲಿ ವಿಶ್ವಾಸ ಬರುವ ನಿಟ್ಟಿನಲ್ಲಿ ಮಾತನಾಡುವುದು ನನ್ನ ಕರ್ತವ್ಯ. ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಇರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆ. ಈ ನಿಟ್ಟಿನಲ್ಲಿ ಜೆ.ಪಿ.ನಡ್ಡಾ, ಅಮಿತ್‌ ಶಾ, ಎಚ್‌.ಡಿ.ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಿನ್ನೆ ದೇವೇಗೌಡರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ವರಿಷ್ಠರು ಹೇಳಿದ್ದನ್ನು ಕೇಳುವುದು ನನ್ನನ್ನೂ ಸೇರಿದಂತೆ ಕಾರ್ಯಕರ್ತರ ಕರ್ತವ್ಯ. ಅದನ್ನು ನಾವು ಮಾಡೇ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ರಾಜ್ಯಾಧ್ಯಕ್ಷನಾಗಿ ಸಂದೇಶ ಕೊಟ್ಟಿರುವೆ:

ನನ್ನ ಹೇಳಿಕೆ ಕುರಿತು ಸುದ್ದಿ ವಾಹಿನಿಗಳಲ್ಲಿ ಭಿನ್ನ ವಿಶ್ಲೇಷಣೆಗಳು ನಡೆಯುತ್ತಿವೆ. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಸಂದೇಶ ಕೊಟ್ಟಿದ್ದೇನೆ. ಬಿಜೆಪಿ-ಜೆಡಿಎಸ್‌ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿ ಯಶಸ್ವಿಯಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ವಿಧಾನಸಭೆ-ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂಬ ದೇವೇಗೌಡರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಜೊತೆಗೆ ಹೋಗಿ ಎಂದರೆ ಹೋಗುವೆವು:

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ. ಒಟ್ಟಿಗೆ ಹೋಗಬೇಕು ಎಂದರೇ ಹೋಗುತ್ತೇವೆ. ಇದರಲ್ಲಿ ತಪ್ಪಾಗಿ ಅರ್ಥೈಸುವುದು ಏನೂ ಇಲ್ಲ. ಎಚ್‌.ಡಿ.ದೇವೇಗೌಡರು ಹಿರಿಯರು. ಈ ರಾಜ್ಯದಲ್ಲಿ ಹೋರಾಟದಿಂದ ಮೇಲೆ ಬಂದು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದವರು ಇಬ್ಬರು ನಾಯಕರು. ಒಂದು ಎಚ್‌.ಡಿ.ದೇವೇಗೌಡರು ಮತ್ತೊಬ್ಬರು ಬಿ.ಎಸ್‌.ಯಡಿಯೂರಪ್ಪ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನನಗೆ ಇಬ್ಬರ ಮೇಲೂ ಸಮಾನ ಗೌರವವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಜೆಡಿಎಸ್‌ ಜತೆ ಮೈತ್ರಿ ಇಲ್ಲ ಎಂದು ನಾನು ಹೇಳಿಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಗುತ್ತಾರೆ. ಏನ್ರೀ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿದೆಯಾ? ಜನ ಮೆಜಾರಿಟಿ ಕೊಟ್ಟಿದ್ದಾರಾ ಎಂದು ಕೇಳುತ್ತಿರುತ್ತಾರೆ. ಅವರ ಕನಸು ಮತ್ತು ನಮ್ಮ ಕಾರ್ಯಕರ್ತರ ಕನಸು ನನಸಾಗಬೇಕು. ಆ ನಿಟ್ಟಿನಲ್ಲಿ ಮುಂದೆ ನಾವು ಹೋರಾಟ ಮಾಡುತ್ತೇವೆ. ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ವಿಶ್ವಾಸದಿಂದ ಕೆಲಸ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಇಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ನಮ್ಮ ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಕುಳಿತು ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತಾರೆ. ನಮ್ಮ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಬಿ.ವೈ.ವಿಜಯೇಂದ್ರ ಹೇಳಿದರು.

---