ತೆರಿಗೆ ನ್ಯಾಯ ಕೇಳಿದ್ದಕ್ಕೆ ದೇಶದ್ರೋಹಿ ಪಟ್ಟ: ಬಿಜೆಪಿ ವಿರುದ್ಧ ಹರಿಹಾಯ್ದ ಸಂಸದ ಡಿಕೆ ಸುರೇಶ್‌

| Published : Feb 27 2024, 01:30 AM IST / Updated: Feb 27 2024, 03:06 PM IST

ತೆರಿಗೆ ನ್ಯಾಯ ಕೇಳಿದ್ದಕ್ಕೆ ದೇಶದ್ರೋಹಿ ಪಟ್ಟ: ಬಿಜೆಪಿ ವಿರುದ್ಧ ಹರಿಹಾಯ್ದ ಸಂಸದ ಡಿಕೆ ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿದರೆ ದೇಶ ವಿರೋಧಿಪಟ್ಟ ಕಟ್ಟಲು ಬಿಜೆಪಿಗರು ಮುಂದಾಗಿದ್ಜಾರೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿದರೆ ದೇಶ ವಿರೋಧಿಪಟ್ಟ ಕಟ್ಟಲು ಬಿಜೆಪಿಗರು ಮುಂದಾಗಿದ್ಜಾರೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಆನೇಕಲ್ ತಾಲೂಕು ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನೀರು ಕುಡಿಯುವ ನೀರಿನ ಯೋಜನೆ, ಹಕ್ಕು ಪತ್ರ ವಿತರಣೆ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಹಸುಗಳ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

ನಾನು ಕನ್ನಡಿಗರಿಗಾಗಿ ರಾಜ್ಯದಿಂದ ಹೋಗುವ ತೆರಿಗೆ ಹಣವನ್ನು ಕರ್ನಾಟಕದ ಜನರಿಗೆ ಮೀಸಲಿಡಬೇಕು ಎಂದು ಧ್ವನಿ ಎತ್ತಿದೆ, ಆದರೆ ಇದಕ್ಕೆ ಬಿಜೆಪಿಯವರು ದೇಶದ್ರೋಹಿಪಟ್ಟ ಕಟ್ಟಿ ಗುಂಡು ಹಾರಿಸಿ ಕೊಲ್ಲಬೇಕು ಎಂದು ಮಾತನಾಡುತ್ತಾರೆ ಎಂದರೆ ಬಿಜೆಪಿಯವರ ಸಂಸ್ಕೃತಿ ಏನು ಎನ್ನುವುದು ಅರ್ಥ ಆಗುತ್ತದೆ ಎಂದು ಕಿಡಿಕಾರಿದರು.

ಕುಟುಂಬ ಕಲ್ಯಾಣ ಯೋಜನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ, ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತಂದ ಬಳಿಕವೂ ಜನಸಂಖ್ಯೆ ಆಧಾರದ ಮೇಲೆ ನಮ್ಮ ತೆರಿಗೆ ಹಣವನ್ನು ಬೇರೆಯವರಿಗೆ ಹಂಚುವುದು ಎಷ್ಟು ಸರಿ, ಜಿಗಣಿ, ಬನ್ನೇರುಘಟ್ಟ, ಸರ್ಜಾಪುರ, ಆನೇಕಲ್‌ಗೆ ಮೆಟ್ರೋ ಕೊಡಬಾರದು ಎಂದು ಬಿಜೆಪಿಯವರಿಗೆ ನಾವು ಹೇಳಿಲ್ಲ.

ಈಗ ಕಾಂಗ್ರೆಸ್ ಸರ್ಕಾರ ಆ ಕೆಲಸವನ್ನು ಮಾಡುತ್ತಿದೆ, ನಾವು ರೈತರ ಪರವಾಗಿ ಕೆಲಸ ಮಾಡಬೇಕಿದೆ, ಕನ್ನಡಿಗರಿಗೆ ಉದ್ಯೋಗ ನೀಡಬೇಕಾಗಿದೆ, ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರ ಆರು ತಿಂಗಳಿಂದ ಜನರ ಖಾತೆಗೆ ಹಣ ಹಾಕುತ್ತಿದೆ. ಆದರೆ ಜನದನ್ ಯೋಜನೆಯ ಮೂಲಕ ಬ್ಯಾಂಕ್ ಖಾತೆ ತೆರೆದು ಇದುವರೆಗೂ ಕಾದರೂ ಒಂದು ರೂಪಾಯಿ ಕೇಂದ್ರ ಸರ್ಕಾರ ಹಾಕಿದ್ದೀಯಾ ಎಂದು ಪ್ರಶ್ನಿಸಿದರು.

ಕನ್ನಡದವರು ತೆರಿಗೆಯನ್ನು ಕೇಂದ್ರಕ್ಕೆ ತಲಾ ₹13,500 ಪ್ರತಿಯೊಬ್ಬರು ಕಟ್ಟುತ್ತಿದ್ದಾರೆ. ಉತ್ತರ ಪ್ರದೇಶ ₹2500 ಕಟ್ಟುತ್ತಾರೆ. ನಿಮ್ಮ ತೆರಿಗೆ ಹಣ ಉತ್ತರ ಭಾರತಕ್ಕೆ ಹರಿದು ಹೋಗುತ್ತಿದೆ. ಕನ್ನಡಿಗರ ತೆರಿಗೆ ಹಣ ಬೇರೆಯವರಿಗೆ ನೀಡುತ್ತಿದ್ದಾರೆ. 

ನಾನು ಈ ವಿಚಾರದಲ್ಲಿ ಧ್ವನಿ ಎತ್ತಿದಾಗ ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದೀರ. ನೂರು ರುಪಾಯಿ ಜಾಗದಲ್ಲಿ ₹13 ರುಪಾಯಿ ರಾಜ್ಯಕ್ಕೆ ಕೊಡುತ್ತಿದ್ದರೆ ನಾನು ಬಿಜೆಪಿಯವವರ ರೀತಿ ಸುಮ್ಮನೆ ಕೂತಿರಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ‌ನೀರನ್ನು ಕೇವಲ ಕಾಂಗ್ರೆಸ್‌ನವರು ಮಾತ್ರ ಕುಡಿಯುತ್ತಿಲ್ಲ ಬಿಜೆಪಿಯವರು ಕುಡಿಯುತ್ತಾರೆ. ಮೇಕೆದಾಟು ಯೋಜನೆಗೆ ಬಿಜೆಪಿಯವರು ಸಹಕಾರ ನೀಡುತ್ತಿಲ್ಲ, ಅವರಿಗೆ ಮೇಕೆದಾಟು ಯೋಜನೆಯ ಬಗ್ಗೆ ಚಿಂತೆ ಇಲ್ಲ, ರಾಜಕಾರಣದ ಚಿಂತೆ ಮಾತ್ರ ಇದೆ. 

ಮುಂದಿನ ಆರು ತಿಂಗಳಲ್ಲಿ ಕಾವೇರಿ ನೀರು ಸಂಪೂರ್ಣವಾಗಿ ಪ್ರತಿಯೊಬ್ಬರ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆನ್ನಾಗರ ಗ್ರಾಪಂ ಅಧ್ಯಕ್ಷ ಆರ್.ಮಹೇಶ್, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರು ಸಂಪರ್ಕ, ಅಂಗನವಾಡಿ ಕಟ್ಟಡ ಶಾಲಾ ಕಟ್ಟಡ, ಹೈ ಮಾಸ್ಕ್ ದೀಪಗಳು, ಹಕ್ಕುಪತ್ರ ವಿತರಣೆ, ವರ್ಗ ಒಂದು ಹಾಗೂ 15ನೇ ಹಣಕಾಸು ಯೋಜನೆ ಅಡಿ ಅನುಷ್ಠಾನಗೊಳಿಸಿದ ಮತ್ತು ಅನುಷ್ಠಾನಗೊಳ್ಳುತ್ತಿರುವ ಶಾಶ್ವತ ಕಾಮಗಾರಿಗಳ ಉದ್ಘಾಟನೆ, 25ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 102 ಹಸುಗಳನ್ನು ವಿತರಣೆ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಕಲ್ಯಾಣ ಕಾರ್ಯಕ್ರಮದಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ, ಪ್ರಸನ್ನ ಕುಮಾರ್, ಮುನಿರತ್ನ ಮುನಿರಾಜು, ಬೆಂಗಳೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಇದ್ದರು.ಬಾಕ್ಸ್...₹25 ಕೋಟಿ ತೆರಿಗೆ ಸಂಗ್ರಹ

ಹೆನ್ನಾಗರ ಗ್ರಾಮ ಪಂಚಾಯಿತಿ ಪ್ರಗತಿಯತ್ತ ಸಾಗುತ್ತಿರುವ ಗ್ರಾಮ ಪಂಚಾಯಿತಿಯಾಗಿದೆ, ಜನರ ಸೇವೆಯನ್ನು ಗ್ರಾಮ ಸ್ವರಾಜ್ಯ ಯೋಜನೆ ಅಡಿ ಮಾಡುತ್ತಿದ್ದಾರೆ, ಹೆನ್ನಾಗರ ಪಂಚಾಯತಿ ಎಂದರೆ ನನಗೆ ಮನೆಯ ಸಮಾನವಾಗಿ ಸಹಕಾರ ನೀಡಿದ್ದು, ಜನರ ಸೇವೆಯ ಪರಿಕಲ್ಪನೆಗಳು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರೋತ್ಸಾಹ ಕೊಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಸುರೇಶ್‌ ತಿಳಿಸಿದರು.

₹55 ಲಕ್ಷ ಆದಾಯ ಇದ್ದ ಪಂಚಾಯಿತಿ ಆದಾಯ ಈಗ ₹25 ಕೋಟಿ ತಲುಪಿದೆ. ಇಡೀ ಪಂಚಾಯಿತಿ ಅಭಿವೃದ್ಧಿಯಲ್ಲಿ ಮುನ್ನುಗ್ಗಿ ಸಾಗುತ್ತಿದೆ. ಪಂಚಾಯತಿಗೆ ಬರುವ ತೆರಿಗೆಯನ್ನು ಶಿಕ್ಷಣ ಹಾಗೂ ವಿವಿಧ ಯೋಜನೆಗಳಿಗೆ ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ಅದನ್ನು ಸರಿಯಾಗಿ ಮಾಡುವುದರಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ಕೆಲಸ ಬಂದಿದೆ ಎಂದರು.