ಸಾರಾಂಶ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪರ ಪುದುಚೇರಿ ಸಚಿವರು ಹಾಗೂ ಶಾಸಕರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಧಿನಗರದ ಚಿಕ್ಕಪೇಟೆ ವಾರ್ಡ್ ಮತ್ತು ಚಾಮರಾಜಪೇಟೆಯಲ್ಲಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪರ ಪುದುಚೇರಿ ಸಚಿವರು ಹಾಗೂ ಶಾಸಕರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಧಿನಗರದ ಚಿಕ್ಕಪೇಟೆ ವಾರ್ಡ್ ಮತ್ತು ಚಾಮರಾಜಪೇಟೆಯಲ್ಲಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದರು.ಪುದುಚೇರಿ ಸಚಿವರಾದ ಎ.ಕೆ.ಸಾಯಿ ಜೆ.ಸರವಣಕುಮಾರ್, ಎ.ನಮಶವಾಯಮ್, ಪುದುಚೇರಿ ಬಿಜೆಪಿ ಅಧ್ಯಕ್ಷ ಸೆಲ್ವಗಣಪತಿ, ಶಾಸಕ ರಿಚರ್ಡ್ಸ್ ಜಾನ್ ಕುಮಾರ್, ಪಿ.ಸಿ.ಮೋಹನ್ ಪರ ಮತಯಾಚಿಸಿದರು. ಸತತ ಮೂರು ಗೆದ್ದು ಹ್ಯಾಟ್ರಿಕ್ ಸಂಸದರಾಗಿರುವ ಪಿ.ಸಿ.ಮೋಹನ್ ಅವರಿಗೆ ಈ ಬಾರಿಯೂ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.
ಬಹಿರಂಗ ಪ್ರಚಾರಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದ್ದು, ಬಿಜೆಪಿ-ಜೆಡಿಎಸ್ ಉತ್ಸಾಹಿ ಕಾರ್ಯಕರ್ತರ ಪಡೆ ಹಾಗೂ ಮುಖಂಡರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಿ.ಸಿ.ಮೋಹನ್ ಪರ ಬಿರುಸಿನ ಪ್ರಚಾರ ನಡೆಸಿದರು. ಈ ಹಿಂದೆ ಶಾಸಕರಾಗಿದ್ದ ಪಿ.ಸಿ.ಮೋಹನ್ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಪ್ರಚಾರದ ವೇಳೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹಾಗೂ ಮೋಹನ್ ಅವರ ವೈಯಕ್ತಿಕ ವರ್ಚಸ್ಸು ಪ್ರಭಾವ ಬೀರುತ್ತಿದೆ. ಪಿ.ಸಿ.ಮೋಹನ್ ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಮಹಿಳೆಯರು, ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳುತ್ತಿರುವುದು ಕಂಡು ಬಂದಿತು.
ಜೆಡಿಎಸ್ ಶಾಸಕ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಮಂಡಲ ಅಧ್ಯಕ್ಷ ಶೈತಾನ್ ಸಿಂಗ್ ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.