ಜೆನ್ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಯುವಜನತೆಯನ್ನು ತಲುಪುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳುಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ನವದೆಹಲಿ: ಜೆನ್ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಯುವಜನತೆಯನ್ನು ತಲುಪುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳುಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ, ಅವರ ಕಳಕಳಿಗಳನ್ನು ಆಲಿಸಲು ಮತ್ತು ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಮತ್ತೊಂದೆಡೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರ ಡಿಜಿಟಲ್ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಸಚಿವರು ಜಾಲತಾಣವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.
ದಿನಕ್ಕೊಂದು ವಿವಿ:
‘ಒಂದು ದಿನ, ಒಂದು ವಿಶ್ವವಿದ್ಯಾಲಯ’ ಕಾರ್ಯಕ್ರಮದಡಿ, ನಿಯೋಜಿತ ಸಚಿವರು ನಿಗದಿತ ವಿವಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಆಲಿಸುವುದರ ಜತೆಗೆ, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು, ಮುಖ್ಯವಾಗಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ವಿವಿಗಳು ಮತ್ತು ಕೇಂದ್ರ ಸಚಿವರ ಭೇಟಿಯನ್ನು ಸಂಘಟಿಸುವ ಹೊಣೆಯನ್ನು ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲೂ ಈ ಯೋಜನೆ ಕುರಿತು ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಪೋರ್ಟ್ ಕಾರ್ಡ್:
ಈ ನಡುವೆ ಜೆನ್ ಝೀಗಳನ್ನು ತಲುಪಲು ಜಾಲತಾಣ ಸಕ್ರಿಯವಾಗಿ ಬಳಸುವಂತೆ ನೀಡಿದ್ದ ಕರೆಗೆ ಸಚಿವರ ಸ್ಪಂದನೆ ಹೇಗಿತ್ತು ಎಂಬುದರ ರಿಪೋರ್ಟ್ ಕಾರ್ಡ್ ಅನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು ಎನ್ನಲಾಗಿದೆ.
ಮೇ 1ರಿಂದ ಆ.15ರವರೆಗೆ ಪ್ರತಿ ಸಚಿವರು ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಿತ್ಯ ಎಷ್ಟು ಪೋಸ್ಟ್ ಹಾಕಿದ್ದಾರೆ, ಒಟ್ಟು ಎಂಗೇಜ್‌ಮೆಂಟ್ ಎಷ್ಟಿತ್ತು, ಸರಾಸರಿ ಎಂಗೇಜ್‌ಮೆಂಟ್, ಒಟ್ಟು ಪೋಸ್ಟ್, ಸರಾಸರಿ ಲೈಕ್ಸ್, ಹಿಂಬಾಲಕರ ಪ್ರಮಾಣ ಎಷ್ಟಿದೆ ಎಂಬುದರ ಮೇಲೆ ಸಚಿವರಿಗೆ ರ್‍ಯಾಂಕ್ ನೀಡಲಾಗಿತ್ತು. ಪ್ರಧಾನಿ ಮೋದಿ ಇದರಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಸಚಿವರು ತಮ್ಮ ಸಂದೇಶಗಳನ್ನು ಹೆಚ್ಚಿನ ಜನರಿಗೆ, ವಿಶೇಷವಾಗಿ ಯುವಜನತೆಗೆ ತಲುಪಿಸಲು ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಜೊತೆಗೆ ಡಿಜಿಟಲ್ ವೇದಿಕೆಗಳ ಮೂಲಕ ಯುವಕರೊಂದಿಗೆ ನಿರಂತರ ಸಂವಾದದಲ್ಲಿ ತೊಡಗಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಆನ್‌ಲೈನ್ ಕೋಚಿಂಗ್: ಮೋದಿ ಘೋಷಣೆ ಜಾರಿ
ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಯುವಕರಿಗೆ ಉಚಿತ ಆನ್‌ಲೈನ್ ಕೋಚಿಂಗ್ ಕ್ಲಾಸ್ ಆರಂಭಿಸುವ ಬಗ್ಗೆ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಯೋಜನೆಯ ಅನುಷ್ಠಾನ, ರೂಪುರೇಷೆ ಮತ್ತಿತರ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ತ್ವರಿತ ಚಾಲನೆಗೆ ಕ್ರಮ ಕೈಗೊಂಡಿದ್ದಾರೆ.


