ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರ ಬಿಜೆಪಿ ತೆಕ್ಕೆಗೆ

| Published : Sep 18 2024, 01:54 AM IST

ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರ ಬಿಜೆಪಿ ತೆಕ್ಕೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ಅಧ್ಯಕ್ಷರ ಚುನಾವಣೆ ಕುರಿತಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅರ್ಜಿದಾರರು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ತಡೆಹಿಡಿದಿದ್ದ ಫಲಿಂತಾಂಶವನ್ನು ಪ್ರಕಟಿಸಲು ನ್ಯಾಯಾಲಯ ಅನುಮತಿ ನೀಡಿದ್ದರಿಂದ ಚುನಾವಣಾಧಿಕಾರಿಯೂ ಆದ ಹಾಗೂ ಉಪ ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಫಲಿತಾಂಶ ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಲ್ಲಿಯ ನಗರಸಭೆಯ ನೂತನ ಅಧ್ಯಕ್ಷರಾಗಿ ಸಂಸದ ಡಾ.ಕೆ.ಸುಧಾಕರ್ ಬೆಂಬಲಿಗರಾದ ಬಿಜೆಪಿ ಸದಸ್ಯ ಗಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ಗ್ಯಾಸ್ ನಾಗರಾಜು ಆಯ್ಕೆಯಾಗಿದ್ದಾರೆ. ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಶವನ್ನು ಪ್ರಕಟಿಸಲು ಮಂಗಳವಾರ ಹೈಕೋರ್ಟ್‌ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಫಲಿತಾಂಶ ಪ್ರಕಟಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

ಅಧ್ಯಕ್ಷ ಸ್ಥಾನಕ್ಕೆ ಸ್ಪಂರ್ಧಿಸಿದ್ದ ಬಿಜೆಪಿಯ ಗಜೇಂದ್ರ 19 ಮತಗಳನ್ನು ಹಾಗೂ ಉಪಾಧ್ಯಕ್ಷ ಸ್ಥಾನ ಕ್ಕೆ ಸ್ಪರ್ಧಿಸಿದ್ದ ಗ್ಯಾಸ್ ನಾಗರಾಜು 20ಮತಗಳನ್ನು ಗಳಿಸಿ ಜಯಶೀಲರಾಗಿದ್ದಾರೆ. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬರೀಶ್ 16 ಮತಗಳನ್ನು ಮತ್ತು ಉಪಾಧ್ಯಕ್ಷ ಸ್ಥಾನ ಕ್ಕೆ ಸ್ಪರ್ಧಿಸಿದ್ದ ಮೀನಾಕ್ಷಿ ಮಿಲ್ಟನ್ ವೆಂಕಟೇಶ್ 15 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಸದ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ನಗರಸಭೆ ನೂತನ ಅಧ್ಯಕ್ಷ -ಉಪಾಧ್ಯಕ್ಷರು ಪದಗ್ರಹಣ ಮಾಡಿದರು.

ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಕೆ.ಸುಧಾಕರ್ ಮಧ್ಯೆ ಭಾರೀ ಪ್ರತಿಷ್ಠೆಗೆ ಕಾರಣವಾಗಿ, ಸಿನಿಮೀಯ ಶೈಲಿಯಲ್ಲಿ ನಡೆದ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕಳೆದ ಗುರುವಾರ ನಡೆದಿತ್ತು. ಆದರೆ ಚುನಾವಣೆಯಲ್ಲಿ ಎಂಎಲ್ಸಿಗಳಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಿದ್ದನ್ನು ವಿರೋಧಿಸಿ ನಗರಸಭಾ ಮಾಜಿ ಸದಸ್ಯ ಆನಂದಬಾಬುರೆಡ್ಡಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಫಲಿಂತಾಶ ಪ್ರಕಟಿಸಿರಲಿಲ್ಲ

ಆಗ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿತಾದರೂ, ಫಲಿತಾಂಶ ರಿಟ್ ಅರ್ಜಿಯ ತೀರ್ಪಿಗೆ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿತ್ತು. ಹಾಗಾಗಿ ಅಂದು ಚುನಾವಣೆ ನಡೆದರೂ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿರಲಿಲ್ಲ. ಕಳೆದ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 16 ಮಂದಿ ಸದಸ್ಯರು, ಬಿಜೆಪಿ 09 ಮಂದಿ ಹಾಗೂ ಜೆಡಿಎಸ್‌ನ ಇಬ್ಬರು ಸೇರಿದಂತೆ 4 ಮಂದಿ ಪಕ್ಷೇತರರು, ಸಂಸದ ಡಾ ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಿದ್ದರು.

ರಿಟ್‌ ಹಿಂಪಡೆದ ಅರ್ಜಿದಾರ

ಚುನಾವಣೆಯ ನಂತರ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಅರ್ಜಿದಾರರು ವಾಪಸ್ಸು ಪಡೆದ ಹಿನ್ನಲೆ ನ್ಯಾಯಾಲಯವು ತಡೆ ಹಿಡಿದಿದ್ದ ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಡಿ.ಹೆಚ್.ಅಶ್ವಿನ್ ಮಂಗಳವಾರ ನಗರಸಭಾ ಸದಸ್ಯರ ಸಭೆ ಕರೆದು ಚುನಾವಣಾ ಫಲಿತಾಂಶ ಪ್ರಕಟಿಸಿದರು.

ಬೆಂಗಳೂರಿಗೆ ಪರ್ಯಾಯ ಚಿಕ್ಕಬಳ್ಳಾಪುರ

ಈ ವೇಳೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್‌, ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗ, ಆಮಿಷ, ಬೆದರಿಕೆ ಇವೆಲ್ಲದರ ನಡುವೆಯೂ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ಗೆಲುವಿಗೆ ಕಾರಣೀಭೂತರಾದ ಎಲ್ಲ ನಾಯಕರಿಗೂ ನನ್ನ ಅಭಿನಂದನೆ ತಿಳಿಸುತ್ತೇನೆ. ಚಿಕ್ಕಬಳ್ಳಾಪುರ ಸುರಕ್ಷಿತ ಹಾಗೂ ಸುಸಜ್ಜಿತ ನಗರವಾಗಿ ಮತ್ತು ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಬೇಕು ಎಂದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂಗಳ ಅನುದಾನ ತಂದಿದ್ದರೂ, ಕಾಂಗ್ರೆಸ್‌ ಸರ್ಕಾರ ಟೆಂಡರ್ ಹಂತದಲ್ಲಿ ರದ್ದು ಮಾಡಿ ರಾಜಕೀಯ ಮಾಡಿತ್ತು. ಕಳೆದ 16 ತಿಂಗಳಿಂದ ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಶೂನ್ಯವಾಗಿತ್ತು. ಇನ್ನು ಮುಂದೆ ಉತ್ತಮ ವಾಗಿ ಅಭಿವೃದ್ದಿ ಹೊಂದಲಿದೆ ಎಂದು ವಿಶ್ವಾಸವನ್ನು ವ್ಯೆಕ್ತಪಡಿಸಿದರು. ನಗರದ ಅಭಿವೃದ್ಧಿಗೆ ಆದ್ಯತೆ

ನೂತನ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ಗ್ಯಾಸ್ ನಾಗರಾಜು ಮಾತನಾಡಿ, ಸಂಸದ ಡಾ.ಕೆ.ಸುಧಾಕರ್‌ ಅವರ ಬೆಂಬಲದಿಂದಾಗಿ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಎರಡೂ ಸ್ಥಾನಗಳು ದೊರೆತಿವೆ. ಇನ್ನು ಮುಂದೆ ನಗರದ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದರು.

ಚುನಾವಣೆಯ ನಂತರ ಬೆಂಬಲಿಗರು,ಮುಖಂಡರು ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ,ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಡಾ.ಕೆ.ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯರು, ಮುಖಂಡರು,ಬೆಂಬಲಿಗರು, ಕಾರ್ಯಕರ್ತರು ಇದ್ದರು .