ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಪರ ಸಿಎಂ ಪ್ರಚಾರ

| Published : Apr 24 2024, 02:20 AM IST

ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಪರ ಸಿಎಂ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸಂಸದರಿಂದ ರಾಜ್ಯದ ಆಗಿರುವ ಉಪಯೋಗ ಶೂನ್ಯ ಎಂದು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಸತ್ತಿನಲ್ಲಿ ರಾಜ್ಯದ ಮತ್ತು ಬೆಂಗಳೂರಿನ ಪರವಾಗಿ ಗಟ್ಟಿ ಧ್ವನಿಯಾಗಿ ಪ್ರತಿನಿಧಿಸಲು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಮತ ಚಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿಕೊಂಡರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ರೋಡ್‌ ಶೋ ಮೂಲಕ ಸೌಮ್ಯಾ ರೆಡ್ಡಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುವವರನ್ನು ಆಯ್ಕೆ ಮಾಡುವುದು ಅನಿವಾರ್ಯ. ಕಳೆದ ಅವಧಿಯಲ್ಲಿ ಬಿಜೆಪಿಯ 25 ಮಂದಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಸಂಸದ ಒಮ್ಮೆಯೂ ರಾಜ್ಯದ ಮತ್ತು ಬೆಂಗಳೂರಿನ ಪರವಾಗಿ ಸಂಸತ್ತಿನಲ್ಲಿ ಮಾತನಾಡಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಅರಿವಿರುವ, ಅದನ್ನು ನಿವಾರಿಸುವ ಗುರಿ ಹೊಂದಿರುವ ಸೌಮ್ಯಾ ರೆಡ್ಡಿ ಅವರ ಪರವಾಗಿ ಮತ ಚಲಾಯಿಸಬೇಕು ಎಂದು ಕೋರಿದರು.

ಕಾಂಗ್ರೆಸ್‌ ಸರ್ಕಾರ ಯಾವಾಗಲೂ ನುಡಿದಂತೆ ನಡೆಯುತ್ತದೆ. ವಿಧಾನಸಭಾ ಚುನಾವಣೆಗೂ ಮುನ್ನ ನೀಡಲಾದ ಭರವಸೆಗಳು, ಘೋಷಣೆ ಮಾಡಲಾದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚನೆಯಾದ ಕೆಲ ದಿನಗಳಲ್ಲೇ ಅನುಷ್ಠಾನಗೊಳಿಸಲಾಗಿದೆ. ಈಗಲೂ ನಾನು ಘೋಷಿಸುತ್ತಿದ್ದೇನೆ, ಸೌಮ್ಯಾ ರೆಡ್ಡಿ ಗೆದ್ದರೆ ಬೆಂಗಳೂರು ದಕ್ಷಿಣ ಮಾತ್ರವಲ್ಲದೆ ಇಡೀ ಬೆಂಗಳೂರಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಜತೆಗೆ ಬೆಂಗಳೂರು ಅಭಿವೃದ್ಧಿಪಥದತ್ತ ಸಾಗಲಿದೆ ಎಂದು ಘೋಷಿಸಿದರು.

ಜಯನಗರ ಕ್ಷೇತ್ರದ ಶಾಸಕಿಯಾಗಿದ್ದಾಗ ಸೌಮ್ಯಾ ರೆಡ್ಡಿ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿದವರು. ಸರ್ಕಾರಿ ಶಾಲೆ ನಿರ್ಮಾಣ ಸೇರಿದಂತೆ ಅವರು ಮಾಡಿದ ಕೆಲಸಗಳನ್ನು ಜನರು ಈಗಲೂ ಸ್ಮರಿಸುತ್ತಾರೆ. ಆದರೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಂಸದರು ಮಾಡಿದ ಮೋಸದಿಂದಾಗಿ ಕೆಲವೇ ಮತಗಳ ಅಂತರಿಂದ ಸೋಲುವಂತಾಗಿದೆ. ಆ ಸೋಲಿನ ನೋವನ್ನು ಲೋಕಸಭಾ ಚುನಾವಣೆಯಲ್ಲಿ ಮತದಾರರು ಮರೆಸಬೇಕು. ಹೆಣ್ಣು ಮಗುವಿಗೆ ಆದಂತಹ ಅನ್ಯಾಯವನ್ನು ಕ್ಷೇತ್ರದ ಮತದಾರರು ಸರಿಪಡಿಸಬೇಕು ಎಂದರು.

ಶಾಸಕ ಕೃಷ್ಣಪ್ಪ, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೇರಿದಂತೆ ಇತರರಿದ್ದರು.ಸೌಮ್ಯಾಗೆ ಅರ್ಚಕರ ಸಂಘದಿಂದ ಬೆಂಬಲ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ ಈಗಾಗಲೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಿವೆ. ಇದೀಗ ಮುಜರಾಯಿ ಅರ್ಚಕರ-ಆಗಮಿಕರ ನೌಕರರ ಸಂಘ, ಹಿಂದು ದೇವಾಲಯಗಳ ಅರ್ಚಕರ-ಆಗಮಿಕರ ಸಂಘವೂ ಸೌಮ್ಯಾ ರೆಡ್ಡಿ ಪರವಾಗಿ ನಿಂತಿದೆ. ಈ ಕುರಿತು ಸಂಘದ ಪ್ರಮುಖರು ಘೋಷಿಸಿದ್ದು, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಕಾರ್ಯಕ್ಕೆ ಬೆಂಬಲವಾಗಿ ಮತ್ತು ಅಭಿನಂದಿಸಲು ಸೌಮ್ಯಾ ರೆಡ್ಡಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.