ಕೇಂದ್ರದಿಂದ ಕರ್ನಾಟಕದ ಜನರ ಶೋಷಣೆ: ಸಿದ್ದರಾಮಯ್ಯ ಕಿಡಿ

| Published : Feb 06 2024, 01:33 AM IST / Updated: Feb 06 2024, 07:29 AM IST

ಕೇಂದ್ರದಿಂದ ಕರ್ನಾಟಕದ ಜನರ ಶೋಷಣೆ: ಸಿದ್ದರಾಮಯ್ಯ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಕರ್ನಾಟಕದ ಜನರಿಗೆ ನಿರಂತರ ಶೋಷಣೆ ಮಾಡುತ್ತಿದ್ದು, ಸರಿಯಾಗಿ ತೆರಿಗೆ ಹಣವನ್ನು ಪಾವತಿ ಮಾಡದೇ ಅನ್ಯಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರವು ಬರ ಪರಿಹಾರ, ಹಣಕಾಸು ಆಯೋಗದ ಅನುದಾನ, ತೆರಿಗೆ ಪಾಲು, ಕೇಂದ್ರದ ಅನುದಾನ ಹಂಚಿಕೆ ಸೇರಿ ಎಲ್ಲಾ ರೀತಿಯಲ್ಲೂ ರಾಜ್ಯಕ್ಕೆ ತೀವ್ರ ಆರ್ಥಿಕ ಅನ್ಯಾಯ ಮಾಡುತ್ತಿದೆ. 

ರಾಜ್ಯದಿಂದ 100 ರು. ಸಂಗ್ರಹಿಸಿ ಕೇವಲ 12 ರು. ವಾಪಸು ನೀಡುತ್ತಿರುವ ಮಲತಾಯಿ ಧೋರಣೆ ವಿರೋಧಿಸಿ ಫೆ.7 ರಂದು ದೆಹಲಿ ಜಂತರ್‌ ಮಂತರ್‌ನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೆ, ಇದು ರಾಜಕೀಯ ಪ್ರತಿಭಟನೆಯಲ್ಲ. ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದು ಪಕ್ಷಭೇದ ಮರೆತು ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲಾ ಸಂಸದರು, ಶಾಸಕರು, ನಾಯಕರೂ ಬರಬೇಕು. ಕರ್ನಾಟಕ ರಾಜ್ಯದ ಹಕ್ಕುಗಳ ಪರ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕರ್ನಾಟಕದ ಜನರ ಶೋಷಣೆಗೆ ಕೇಂದ್ರವು ನಿಂತಿದೆ. 

ಹಾಲು ನೀಡುವ ಕೆಚ್ಚಲನ್ನೇ ಕುಯ್ಯುತ್ತಿದೆ. 4.53 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸುತ್ತಿದ್ದರೂ ಎಲ್ಲಾ ಮೂಲಗಳಿಂದ 50 ಸಾವಿರ ಕೋಟಿ ರು. ಮಾತ್ರ ರಾಜ್ಯಕ್ಕೆ ನೀಡುತ್ತಿದೆ. ಹೀಗಾಗಿ ಜಂತರ್‌ ಮಂತರ್‌ನಲ್ಲಿ ಫೆ.7ರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯಕ್ಕೆ ತೀವ್ರ ಅನ್ಯಾಯ:ಕೇಂದ್ರ ಸರ್ಕಾರದ ದಾಖಲೆ ಹಾಗೂ ಅಂಕಿ-ಅಂಶ ಮುಂದಿಟ್ಟುಕೊಂಡು ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ದ್ರೋಹ, ಅನ್ಯಾಯ, ವಂಚನೆ, ಮಲತಾಯಿ ಧೋರಣೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕೇಂದ್ರಕ್ಕೆ ರಾಜ್ಯದಿಂದ 2023-24ರಲ್ಲಿ 2.33 ಲಕ್ಷ ಕೋಟಿ ರು. ಆದಾಯ ತೆರಿಗೆ, 1.40 ಲಕ್ಷ ಕೋಟಿ ರು. ಜಿಎಸ್‌ಟಿ, 30 ಸಾವಿರ ಕೋಟಿ ರು. ಇಂಧನಗಳ ಮೇಲಿನ ಸೆಸ್‌ ಹಾಗೂ ಸರ್‌ಚಾರ್ಜ್, 30 ಸಾವಿರ ಕೋಟಿ ರು. ಕಸ್ಟಮ್ಸ್‌ ತೆರಿಗೆ, 16 ಸಾವಿರ ಕೋಟಿ ರು. ಜಿಎಸ್‌ಟಿ ಸೆಸ್‌ ಸೇರಿ 4.53 ಲಕ್ಷ ಕೋಟಿ ರು. ಸಂಗ್ರಹವಾಗಿದೆ. 

ಆದರೆ, ಇದರಲ್ಲಿ ರಾಜ್ಯಕ್ಕೆ ವಾಪಸು ನೀಡುತ್ತಿರುವುದು 50,257 ಕೋಟಿ ರು. ಮಾತ್ರ. ಅಂದರೆ 100 ರು.ಗೆ 12 ರು. ಮಾತ್ರ ವಾಪಸು ನೀಡುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದರಿಂದ ಹೋರಾಟ ಅನಿವಾರ್ಯ ಎಂದರು.

ಬಜೆಟ್‌ ಹಿಗ್ಗುತ್ತಿದೆ, ರಾಜ್ಯದ ಪಾಲು ಕುಗ್ಗುತ್ತಿದೆ:2017-18ರಲ್ಲಿ ಕೇಂದ್ರದ ಬಜೆಟ್‌ ಗಾತ್ರ 21.46 ಲಕ್ಷ ಕೋಟಿ ರು. ಇದ್ದಾಗ ಅನುದಾನ ಹಾಗೂ ನಗದು ಹಂಚಿಕೆ ಸೇರಿ 47,990 ಕೋಟಿ ರು. ಬಂದಿತ್ತು. ಇದೀಗ ಬಜೆಟ್‌ ಗಾತ್ರ 2023-24ಕ್ಕೆ 45.03 ಲಕ್ಷ ಕೋಟಿ ರು. ಆಗಿದ್ದರೂ ಕೇವಲ 50,257 ಕೋಟಿ ರು. ಬಂದಿದೆ. 

ಅನುದಾನ ಹಂಚಿಕೆ ಶೇ.2.6 ರಿಂದ ಶೇ.1.23ಕ್ಕೆ ಕುಸಿದಿದೆ ಎಂದು ಟೀಕಾಪ್ರಹಾರ ನಡೆಸಿದರು.14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ.4.71% ಇದ್ದದ್ದು, 15ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಕೆಯಾಯಿತು. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರು. ಕಡಿತ ಆಯಿತು. 

ಈ ವರ್ಷವೂ ಅನ್ಯಾಯ ಮುಂದುವರೆದಿದೆ ಎಂದು ಹೇಳಿದರು.ನಿರ್ಮಲಾ ಸೀತಾರಾಮನ್‌ಗೆ ತಿರುಗೇಟು:ರಾಜ್ಯದ ಅನುದಾನವನ್ನು ಹಣಕಾಸು ಸಚಿವರು ತಪ್ಪಿಸಲಾಗಲ್ಲ ಎಂಬ ನಿರ್ಮಲಾ ಸೀತಾರಾಮನ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು, 15ನೇ ಹಣಕಾಸು ಆಯೋಗದಲ್ಲಿ ಆಗಿದ್ದ ಅನ್ಯಾಯ ಸರಿಪಡಿಸಲು 5,495 ಕೋಟಿ ರು. ಪರಿಹಾರ ನೀಡುವಂತೆ ಮಧ್ಯಂತರ ವರದಿಯನ್ನು ಆಯೋಗ ನೀಡಿತ್ತು.

ಈ ಹಣ ನೀಡಬೇಕೆಂಬ ಬೇಡಿಕೆಯನ್ನು ಇದೇ ನಿರ್ಮಲಾ ಸೀತಾರಾಮನ್‌ ತಿರಸ್ಕರಿಸಿದರು. ಇನ್ನು ನಿರ್ಮಲಾ ಸೀತಾರಾಮನ್‌ ಅವರೇ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಹಣವನ್ನು ಬಜೆಟ್‌ನಲ್ಲೇ ಘೋಷಿಸಿದ್ದರು. 

ಆದರೆ ಅದನ್ನು ಯಾಕೆ ನೀಡಲಿಲ್ಲ? ಪೆರಿಫೆರಲ್‌ ರಿಂಗ್ ರಸ್ತೆಗೆ 3000 ಕೋಟಿ ರು. ಹಾಗೂ ಕೆರೆಗಳಿಗೆ ನಿಗದಿಪಡಿಸಿದ್ದ 3 ಸಾವಿರ ಕೋಟಿ ರು.ಗಳನ್ನು ಇದೇ ನಿರ್ಮಲಾ ಸೀತಾರಾಮನ್‌ ಅವರು ರದ್ದುಪಡಿಸಿದ್ದಾರೆ. ಈ ಬಗ್ಗೆ ಏನು ಹೇಳುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಕೇಂದ್ರವು ತೀವ್ರ ಅನ್ಯಾಯ ಮಾಡುತ್ತಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಶಬರಿಯಂತೆ ಕಾದರೂ ಪ್ರಯೋಜನವಾಗಿಲ್ಲ: ರಾಜ್ಯದಲ್ಲಿ ಬರದಿಂದ 35 ಸಾವಿರ ರು. ಕೋಟಿ ಬೆಳೆ ನಷ್ಟ ಆಗಿದೆ. ಇದಕ್ಕೆ 17901 ಕೋಟಿ ರು. ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. ಹಲವಾರು ಬಾರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಗೋಗರೆದರೂ ನೀಡಿಲ್ಲ ಎಂದರು ಕಿಡಿಕಾರಿದರು.

ನಾಳಿನ ದಿಲ್ಲಿ ಪ್ರತಿಭಟನೆಗೆ ಪಕ್ಷಭೇದ ಮರೆತು ಎಲ್ಲರೂ ಬನ್ನಿನರೇಂದ್ರ ಮೋದಿ ಅವರು ಸೂಕ್ಷ್ಮತೆ ಹೊಂದಿದ್ದಾರೆ. ಹೀಗಾಗಿ ಪ್ರತಿಭಟನೆ ಬಳಿಕವಾದರೂ ರಾಜ್ಯದ ಪಾಲಿನ ಹಣ ನೀಡುತ್ತಾರೆ ಎಂಬ ನಂಬಿಕೆಯಿದೆ. 

ಹೀಗಾಗಿಯೇ ಜಂತರ್‌ ಮಂತರ್‌ನಲ್ಲಿ ಫೆ.7ರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಪಕ್ಷಭೇದ ಮರೆತು ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲಾ ಸಂಸದರು, ಶಾಸಕರು, ನಾಯಕರೂ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಶ್ವೇತಪತ್ರ ಮಂಡನೆಗೆ ಚಿಂತನೆ: ಸಿಎಂಕಳೆದ 5 ವರ್ಷದಲ್ಲಿ ರಾಜ್ಯಕ್ಕೆ 1.87 ಲಕ್ಷ ಕೋಟಿ ರು. ಅನ್ಯಾಯ ಆಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸುವ ಚಿಂತನೆಯಿದೆ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.