ದತ್ತಪೀಠ ಕೇಸ್‌ ಮರುತನಿಖೆ ಪೂರ್ಣ ಸುಳ್ಳುಸುದ್ದಿ: ಸಿಎಂ ಸಿದ್ದರಾಮಯ್ಯ

| Published : Jan 05 2024, 01:45 AM IST / Updated: Jan 05 2024, 02:41 PM IST

ದತ್ತಪೀಠ ಕೇಸ್‌ ಮರುತನಿಖೆ ಪೂರ್ಣ ಸುಳ್ಳುಸುದ್ದಿ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಸರ್ಕಾರ ಮರುತನಿಖೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಇದು ಸರ್ಕಾರವಲ್ಲಿ ಕೋರ್ಟ್‌ ಸಮನ್ಸ್‌ ನೀಡಿದ ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಬಾಬುಡನ್ ಗಿರಿಯ ಗೋರಿ ದ್ವಂಸ ಪ್ರಕರಣವನ್ನು ಮರು ತನಿಖೆ ನಡೆಸಲು ಸರ್ಕಾರ ಮುಂದಾಗಿದೆ ಎಂಬುದು ತಪ್ಪು ಮಾಹಿತಿ ಹಾಗೂ ಸಂಪೂರ್ಣ ಸುಳ್ಳು ಸುದ್ದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಕೆಲ ಮಾಧ್ಯಮಗಳಲ್ಲಿ ಈ ರೀತಿಯ ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ. 

2017ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಮಾ.19ರಂದು ವಿಚಾರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023ರ ಸೆಪ್ಟೆಂಬರ್ 7ರಂದು ಸರ್ಕಾರ ಅನುಮತಿ ನೀಡಿತ್ತು. 2023ರ ಅಕ್ಟೋಬರ್ 24ರಂದು ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು, ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ. ಇದು ಸಹಜ ಕಾನೂನು ಪ್ರಕ್ರಿಯೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿ, ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಇಂತಹ ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ, ಜೊತೆಗೆ ಕಾನೂನು ಸುವ್ಯವಸ್ಥೆ ಕೂಡ ಹದಗೆಡುವ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.