ಸಾರಾಂಶ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿಯ ಸದ್ದು ಕೇಳಿಬರುತ್ತಿರುವ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೋಮವಾರ ಔತಣಕೂಟ ಆಯೋಜಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಂಜೆ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಔತಣಕೂಟ ನಡೆಯಲಿದೆ.
ಔತಣಕೂಟದಲ್ಲಿ ರುಚಿಕರ ಊಟ ಮಾತ್ರವಲ್ಲ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ. ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ನವೆಂಬರ್ ಕ್ರಾಂತಿ, ಸಂಪುಟ ಪುನರ್ ರಚನೆ ವಿಚಾರದ ಸತ್ಯಾಸತ್ಯತೆ ಎಷ್ಟು ಎಂಬ ಮಾಹಿತಿ ಸಚಿವರಿಗೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸೋಮವಾರ ಬೆಳಗ್ಗೆ 9.45ಕ್ಕೆ ಕಿತ್ತೂರು ಉತ್ಸವ ಜ್ಯೋತಿಗೆ ವಿಧಾನಸೌಧ ಮುಂಭಾಗ ಚಾಲನೆ ನೀಡಿ ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಧಾರವಾಡ ಮತ್ತು ಬಾಗಲಕೋಟೆ ಜಿಲ್ಲಾ ಪ್ರವಾಸಕ್ಕೆ ಸಿಎಂ ತೆರಳಲಿದ್ದಾರೆ. ಸಂಜೆ 5.30ಕ್ಕೆ ನಗರಕ್ಕೆ ವಾಪಸ್ಸಾಗುವ ಮುಖ್ಯಮಂತ್ರಿ ಅವರು 6 ಗಂಟೆಗೆ ಕಾವೇರಿ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದ್ದಾರೆ.
ಮುಖ್ಯಮಂತ್ರಿ ಅವರ ಔತಣ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರ ಸಚಿವರು, ಮುಖ್ಯಮಂತ್ರಿ ಅವರು ನಮ್ಮ ನಾಯಕರು. ಆಗಾಗ ಔತಣ ಕೂಟ ಕರೆಯುತ್ತಾರೆ. ಊಟಕ್ಕೂ ಕರೆಯಬಾರದಾ? ಔತಣ ಕೂಟಕ್ಕೂ ರಾಜಕೀಯ ವಿಚಾರಗಳಿಗೂ ಸಂಬಂಧ ಇಲ್ಲ ಎಂದು ಹೇಳಿದ್ದರು.ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ನಮ್ಮ ಕಡೆ ನಾಟಿ ಕೋಳಿ ಮಾಡಲ್ಲ. ಮುಖ್ಯಮಂತ್ರಿ ಅವರು ನಾಟಿ ಕೋಳಿ, ಮುದ್ದೆ ಸಾರು ಮಾಡಿಸುತ್ತಾರೆ ಎನ್ನುವ ನಿರೀಕ್ಷೆ ಎಂದು ಹೇಳಿದ್ದರಲ್ಲದೆ, ಸೋಮವಾರ ಎಂದು ನೆನಪಿಸಿದಾಗ ಅದೂ ನಮಗೆ ಗೊತ್ತಿರಲಿಲ್ಲ, ಸೊಪ್ಪಿನ ಸಾರು ಮುದ್ದೆ ಕೊಟ್ಟರೂ ಊಟ ಮಾಡಿ ಬರುತ್ತೇವೆ ಎಂದಿದ್ದರು.