ಡಿಕೆಶಿ ಭಯದಿಂದ ಸಿದ್ದು ಬೆಂಗ್ಳೂರು ಬಿಡ್ತಿಲ್ಲ: ಬಿವೈವಿ

| Published : Apr 10 2025, 02:00 AM IST

ಸಾರಾಂಶ

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಫೈಟ್‌ ಶುರುವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ಬೆಂಗಳೂರು ಬಿಟ್ಟು ಹೊರಗಡೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಭಾರೀ ಫೈಟ್‌

ಜನಾಕ್ರೋಶ ಯಾತ್ರೆಯಲ್ಲಿ ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಕಿಡಿ

==

ಜನಾಕ್ರೋಶ ಯಾತ್ರೆ ಲೋಗೋ

==

ಕನ್ನಡಪ್ರಭ ವಾರ್ತೆ ಮಂಗಳೂರು/ಮಡಿಕೇರಿ

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಫೈಟ್‌ ಶುರುವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ಬೆಂಗಳೂರು ಬಿಟ್ಟು ಹೊರಗಡೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಅಲ್ಪಸಂಖ್ಯಾತ ಓಲೈಕೆ ನೀತಿ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ 3ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಮಡಿಕೇರಿ ಹಾಗೂ ಮಂಗಳೂರುಗಳಲ್ಲಿ ಜನಾಕ್ರೋಶ ಯಾತ್ರೆಯ ಸಮಾವೇಶ ನಡೆಯಿತು. ಬೆಳಗ್ಗೆ ಮಡಿಕೇರಿಯಲ್ಲಿ ಚೌಡೇಶ್ವರಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾವೇಶ ನಡೆಸಲಾಯಿತು. ಬಳಿಕ, ಮಧ್ಯಾಹ್ನ ಮಂಗಳೂರಿನಲ್ಲಿ ಬಿಜೆಪಿ ಕಚೇರಿಯಿಂದ ನಗರದ ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ನಡೆಯಿತು. ಬಳಿಕ, ಅಂಬೇಡ್ಕರ್‌ ವೃತ್ತದಲ್ಲಿ 83 ವರ್ಷ ವಯಸ್ಸಿನ ಬಿಜೆಪಿ ಹಿರಿಯ ಕಾರ್ಯಕರ್ತೆ ವತ್ಸಲಾ ಕಾಮತ್‌ ಅವರು ಬಿಜೆಪಿ ಧ್ವಜವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಸ್ತಾಂತರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ಅವರ ಆಡಳಿತ ನೋಡಿದರೆ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್‌ ಮುಖ್ಯಮಂತ್ರಿಯೋ ಎಂಬ ಅನುಮಾನ ಬರುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯ ಪ್ರವಾಸಕ್ಕೆ ತೆರಳಿದರೆ ತಮ್ಮ ಸಿಎಂ ಕುರ್ಚಿಯನ್ನು ಡಿಕೆಶಿ ಕಸಿದು ಬಿಡುವ ಭೀತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಇನ್ನೊಂದೆಡೆ, ರಾಜ್ಯ ಪ್ರವಾಸ ನಡೆಸಿದರೆ ಜನತೆ ತಲೆ ಬಗ್ಗಿಸಿ ಎಲ್ಲಿ ಬಡಿಗೆಯಲ್ಲಿ ಹೊಡೆಯುತ್ತಾರೋ ಎಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡಿದಂತಿದೆ ಎಂದು ಲೇವಡಿ ಮಾಡಿದರು.

ಯಾವುದೇ ಶಾಸಕರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸ್ವತಃ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳುತ್ತಿದ್ದಾರೆ. ಶಾಸಕ ಬಿ.ಆರ್‌.ಪಾಟೀಲ್‌ ಅವರು ಗ್ಯಾರಂಟಿ ಯೋಜನೆಯಿಂದ ಅನುದಾನ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಆರ್‌.ವಿ.ದೇಶಪಾಂಡೆ ಅವರು ಶಾಸಕನಾಗಿ ಎರಡು ವರ್ಷವಾದರೂ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಅಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದ ಜೊತೆ ಸಂಘರ್ಷದ ಹಾದಿ ತುಳಿಯುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂನಂತಾಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಆಗಿದೆ ಎಂದು ಟೀಕಿಸಿದರು.

ದೇಶದ್ರೋಹಿಗೆ ಗುಂಡಿಕ್ಕುತ್ತಿದ್ದೆವು:

ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಎಲ್ಲರೆದುರೇ ಮುತ್ತಿಡುತ್ತಾನೆ. ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ ಗುಂಡಿಕ್ಕುತ್ತಿದ್ದೆವು. ಸಿದ್ದರಾಮಯ್ಯ ಬಜೆಟ್‌ನಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಕೊಡಲಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಸಿದ್ದರಾಮಯ್ಯ ರಕ್ಷಣೆ ನೀಡುತ್ತಾರೆ. ಆದರೆ, ಅಭಿವೃದ್ಧಿಯಾಗದ್ದನ್ನು ಪ್ರಶ್ನಿಸಿದರೆ ಅಂತವರ ವಿರುದ್ಧ ಕೇಸ್‌ ಹಾಕುತ್ತಾರೆ. ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಸ್ಥಳೀಯ ಶಾಸಕರೇ ಕಾರಣ. ಇಂತಹ ಹಿಂದೂ ವಿರೋಧಿ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹಾಕುತ್ತಾರೆ ಎಂದು ವಿಜಯೇಂದ್ರ ಗುಡುಗಿದರು.

ವಿಪಕ್ಷ ನಾಯಕ ಆರ್. ಅಶೋಕ್‌, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಶ್ರೀರಾಮುಲು ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.