ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆದರಿಸಲಾಗುತ್ತಿದೆ : ಲಕ್ಷ್ಮಣ ಆರೋಪ

| Published : Oct 24 2024, 12:51 AM IST / Updated: Oct 24 2024, 04:17 AM IST

ಸಾರಾಂಶ

ಎಂಡಿಎ ನಲ್ಲಿ 5 ಸಾವಿರ ಕೋಟಿ ಹಗರಣ ನಡೆದಿದ್ದರೆ ಪಟ್ಟಿ ಬಿಡುಗಡೆಗೊಳಿಸಿ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯಗೆ ಬಂಡೆಯಂತೆ ನಿಲ್ಲುತ್ತದೆ. ಈ ಉಪ ಚುನಾವಣೆಯಲ್ಲಿ ಜನ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಕುಮಾರಸ್ವಾಮಿ ಇದುವರೆಗೂ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ.  

 ಮೈಸೂರು : ಮುಡಾ ಕಚೇರಿ ಮೇಲೆ ಇಡಿ ದಾಳಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆದರಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ಉಪ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ನೋಟಿಸ್ ನೀಡುವ ಸಾಧ್ಯತೆ ಇದೆ. ಮುಡಾ ಮೇಲೆ ಇಡಿ ದಾಳಿ ವೇಳೆ ಹಲವು ದಾಖಲೆಯನ್ನು ಕೊಂಡೊಯ್ದಿದ್ದಾರೆ. ಯಾವುದಾದರೂ ತನಿಖಾ ಸಂಸ್ಥೆ ವರದಿ ನೀಡಿ, ಮನಿ ಲಾಂಡ್ರಿಂಗ್ ಆಗಿದ್ದರೆ ಅಥವಾ ಹಣ ಅವ್ಯವಹಾರ ಆಗಿದ್ದರೆ ಮಾತ್ರ ಇಡಿ ಅಧಿಕಾರಿಗಳು ಪ್ರವೇಶಿಸಬೇಕು. ಆದರೆ, ಈ ಪ್ರಕರಣದಲ್ಲಿ ಲೋಕಾಯುಕ್ತ ಮತ್ತು ನ್ಯಾಯಧೀಶರ ತನಿಖಾ ತಂಡ ತನಿಖೆ ಮಾಡುವ ಹಂತದಲ್ಲೇ ಇಡಿ ಪ್ರವೇಶಿಸಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಇದು ಸಿದ್ದರಾಮಯ್ಯ ಅವರನ್ನು ಬೆದರಿಸುವ ಕೆಲಸವಷ್ಟೇ. ಸಾಕ್ಷಿ, ದಾಖಲೆ ಸೃಷ್ಟಿ ಮಾಡುವ ಕೆಲಸಕ್ಕೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಅಪರಾಧ ನಡೆಯುವ ಮುನ್ನವೇ ಇವರೇ ಕೆಲವು ಅಧಿಕಾರಿಗಳನ್ನ ಬೆದರಿಸಿ, ಸಹಿ ಮಾಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ನ್ಯಾಾಯಾಲಯದ ಮೊರೆ ಹೋಗುತ್ತೇವೆ ಎಂದರು.

ಈಗಾಗಲೇ ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸಿದೆ. ರಾಜ್ಯದಲ್ಲಿಯೂ ಉಪ ಚುನಾವಣೆ ನಡೆಯುತ್ತಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡುವ ಸಾಧ್ಯತೆ ಇದೆ. ಬಿಜೆಪಿ ಅವರ ಮನಸ್ಥಿತಿ ಏನು ಎಂಬುದು ಇದರಿಂದ ತಿಳಿಯುತ್ತದೆ. ಸಾವಿರಾರು ಕೋಟಿ ಹಗರಣದಲ್ಲಿ ಭಾಗಿಯಾಗಿರೋರು ಬಿಜೆಪಿ ಸೇರ್ಪಡೆಯಾದರೆ ಕ್ಲಿನ್ ಚೀಟ್ ಕೊಡಿಸುವ ಕೆಲಸ ಆಗುತ್ತದೆ. ಅಜಿತ್ ಪವಾರ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವರ ಹಗರಣಗಳಿಗೆ ಕ್ಲಿನ್ ಚೀಟ್ ನೀಡಲಾಗಿದೆ ಎಂದು ಅವರು ಕಿಡಿಕಾರಿದರು.

ಎಂಡಿಎ ನಲ್ಲಿ 5 ಸಾವಿರ ಕೋಟಿ ಹಗರಣ ನಡೆದಿದ್ದರೆ ಪಟ್ಟಿ ಬಿಡುಗಡೆಗೊಳಿಸಿ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯಗೆ ಬಂಡೆಯಂತೆ ನಿಲ್ಲುತ್ತದೆ. ಈ ಉಪ ಚುನಾವಣೆಯಲ್ಲಿ ಜನ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಕುಮಾರಸ್ವಾಮಿ ಇದುವರೆಗೂ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಕೆಲಸ. ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಶಿವಣ್ಣ ಮಾತನಾಡಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಸದರಾಗಿ ಐದು ತಿಂಗಳಾಗಿದೆ. ಆದರೆ, ಮೈಸೂರು ಕೊಡಗು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಸಿಎಂ ರಾಜೀನಾಮೆ ಬಗ್ಗೆ ನೀವು ಮಾತನಾಡಿದ್ದೀರಾ. ನಿಮ್ಮ ಪಕ್ಕದಲ್ಲೇ ಕುಳಿತಿದ್ದ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಮಾತನಾಡಿ ಎಂದು ಅವರು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ. ರಾಮು, ವಕ್ತಾರ ಮಹೇಶ್ ಮೊದಲಾದವರು ಇದ್ದರು.