ಆಡಳಿತದಲ್ಲಿ ಮತ್ತಷ್ಟು ದಕ್ಷತೆ ತರಲು ಮತ್ತು ಆಡಳಿತಾತ್ಮಕ ವೆಚ್ಚ ಕಡಿತದ ಉದ್ದೇಶದೊಂದಿಗೆ ಪ್ರಮುಖ ಇಲಾಖೆಗಳು ಮತ್ತು ನಿಗಮ-ಮಂಡಳಿಗಳನ್ನು ವಿಲೀನಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರು : ಆಡಳಿತದಲ್ಲಿ ಮತ್ತಷ್ಟು ದಕ್ಷತೆ ತರಲು ಮತ್ತು ಆಡಳಿತಾತ್ಮಕ ವೆಚ್ಚ ಕಡಿತದ ಉದ್ದೇಶದೊಂದಿಗೆ ಪ್ರಮುಖ ಇಲಾಖೆಗಳು ಮತ್ತು ನಿಗಮ-ಮಂಡಳಿಗಳನ್ನು ವಿಲೀನಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಒಂದೇ ತೆರನಾದ ಕೆಲಸ ಮಾಡುವ ಕೆಲ ಇಲಾಖೆಗಳನ್ನು ವಿಲೀನ ಮಾಡುವುದು, ಸಮನ್ವಯ ಕೊರತೆ ನೀಗಿಸಿ ಆಡಳಿತದಲ್ಲಿ ದಕ್ಷತೆ ತರುವುದು, ಸರ್ಕಾರಕ್ಕಾಗುವ ಹೆಚ್ಚಿನ ಆಡಳಿತಾತ್ಮಕ ಹೊರೆ ತಗ್ಗಿಸುವ ಉದ್ದೇಶದೊಂದಿಗೆ ಇಲಾಖೆಗಳು, ನಿಗಮ-ಮಂಡಳಿಗಳನ್ನು ವಿಲೀನಗೊಳಿಸುವ ಕುರಿತು ರಾಜ್ಯ ಆಡಳಿತ ಸುಧಾರಣಾ ಆಯೋಗವು ಈ ಹಿಂದೆ ನೀಡಿದ್ದ ವರದಿಯಲ್ಲಿ ತಿಳಿಸಿತ್ತು. ಇದೀಗ ಆ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ನಿಗಮ-ಮಂಡಳಿಗಳ ಜತೆಗೆ ಕೆಲ ಇಲಾಖೆಗಳನ್ನು ವಿಲೀನಗೊಳಿಸಿ ಸುಗಮ ಆಡಳಿತಕ್ಕೆ ದಾರಿ ಮಾಡಿಕೊಡಲು ಮುಂದಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಗಂಭೀರ ಚಿಂತನೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ.
ಒಂದೇ ತೆರನಾದ ಕೆಲಸ ಮಾಡುವ ಇಲಾಖೆಗಳು:
ಇಲಾಖೆಗಳ ವಿಲೀನಕ್ಕೆ ಪ್ರಮುಖವಾಗಿ ಒಂದೇ ತೆರನಾದ ಕೆಲಸ ಮಾಡುವ ಇಲಾಖೆಗಳು ಮತ್ತು ಸಮನ್ವಯ ಸಾಧಿಸುವುದು ಕಷ್ಟವಾಗುತ್ತಿರುವ ಇಲಾಖೆಗಳನ್ನು ಆಯ್ಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ಇಲಾಖೆಯ ಕಾರ್ಯಗಳು ಬಹುತೇಕ ಹೋಲುತ್ತವೆ. ಆದರೆ, ನಗರಾಭಿವೃದ್ಧಿ ಇಲಾಖೆ ನಗರಸಭೆ, ಮಹಾನಗರ ಪಾಲಿಕೆಗಳ ಸುಪರ್ದಿಯನ್ನು ಹೊಂದಿದ್ದರೆ, ಪೌರಾಡಳಿತ ಇಲಾಖೆಯು ಪುರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಹೊಂದಿದೆ. ಉಳಿದ ಕೆಲಸಗಳೆಲ್ಲವೂ ಒಂದೇ ರೀತಿಯಲ್ಲಿವೆ. ಹೀಗಾಗಿ ಪೌರಾಡಳಿತ ಇಲಾಖೆಯನ್ನು ನಗರಾಭಿವೃದ್ಧಿ ಇಲಾಖೆಯೊಂದಿಗೆ ವಿಲೀನಗೊಳಿಸಿ, ಪೌರಾಡಳಿತದ ಎಲ್ಲಾ ಕಾರ್ಯಗಳನ್ನು ನಗರಾಭಿವೃದ್ಧಿಗೆ ವಹಿಸಲಾಗುತ್ತದೆ.
ಹಾಗೆಯೇ, ಕೃಷಿ ಇಲಾಖೆಯಂತೆಯೇ ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಕೃಷಿಗೆ ಸಂಬಂಧಿಸಿದ್ದಾಗಿದೆ. ಈ ಮೂರೂ ಇಲಾಖೆಗಳು ರೈತರಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತವೆ. ಹೀಗಾಗಿ ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಚರ್ಚೆ ನಡೆಸಲಾಗಿದೆ. ಆ ಮೂಲಕ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸೇವೆ ಒಂದೇ ಇಲಾಖೆಯಿಂದ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ.
ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ ಪರಿಹಾರ ನೀಡುವ ಸಂಬಂಧ ಪ್ರಜಾಸೇವಾ ಇಲಾಖೆ ಸೃಜಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಅಧಿಕೃತ ಆದೇಶವನ್ನೂ ಮಾಡಲಾಗಿದೆ. ಆಡಳಿತ ಸುಧಾರಣಾ ವಿಭಾಗ ಮತ್ತು ಸಾರ್ವಜನಿಕ ಕುಂದುಕೊರತೆ ವಿಭಾಗವನ್ನು ಪ್ರಜಾಸೇವಾ ಇಲಾಖೆಯೊಂದಿಗೆ ವಿಲೀನಗೊಳಿಸುವ ಚಿಂತನೆ ನಡೆಸಲಾಗಿದೆ.
ಸದ್ಯ ಇಲಾಖೆಗಳ ವಿಲೀನವು ಚರ್ಚಾ ಹಂತದಲ್ಲಿದ್ದು, ಅದರಿಂದ ಎದುರಾಗುವ ಸಾಧಕ-ಬಾಧಕಗಳು, ಕಾನೂನಾತ್ಮಕ ತೊಡಕುಗಳು, ತಾಂತ್ರಿಕ ಸವಾಲುಗಳ ಬಗ್ಗೆ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಅದು ಮುಗಿದ ನಂತರ ಅವರು ನೀಡುವ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಚರ್ಚಿಸಿ ಮುಂದಿನ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ.
ವಿಲೀನಕ್ಕೆ ಆಯೋಗದ ಶಿಫಾರಸು:
ಆಡಳಿತದಲ್ಲಿ ದಕ್ಷತೆ ತರುವ ಉದ್ದೇಶದೊಂದಿಗೆ ಈಗಿನ ಕಾಲಘಟ್ಟಕ್ಕೆ ಅಪ್ರಸ್ತುತವಾದ 7 ನಿಗಮ-ಮಂಡಳಿಗಳು ಹಾಗೂ ಒಂದೇ ರೀತಿಯ ಕೆಲಸ ಮಾಡುವ 9 ನಿಗಮ-ಮಂಡಳಿಗಳನ್ನು ಬೇರೆ ನಿಗಮ ಅಥವಾ ಇಲಾಖೆಯೊಂದಿಗೆ ವಿಲೀನ ಮಾಡುವಂತೆ ಆಡಳಿತ ಸುಧಾರಣಾ ಆಯೋಗ-2 ಈ ಹಿಂದೆಯೇ ವರದಿ ನೀಡಿತ್ತು. ಅದರ ಜತೆಗೆ ಅದೇ ಮಾದರಿಯಲ್ಲಿ ಇಲಾಖೆಗಳನ್ನೂ ವಿಲೀನ ಮಾಡಬಹುದು, ಅದಕ್ಕಾಗಿ ಪರಿಶೀಲನೆ ಅಗತ್ಯ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದೀಗ ಸರ್ಕಾರವು ಇಲಾಖೆಗಳ ವಿಲೀನಕ್ಕೆ ಮುಂದಾಗಿದ್ದು, ಅದರ ಜತೆಗೆ ನಿಗಮ-ಮಂಡಳಿಗಳ ವಿಲೀನವನ್ನೂ ಮಾಡುವ ಸಾಧ್ಯತೆಗಳಿವೆ.
ವಿಲೀನ ಏಕೆ?
ಒಂದೇ ತೆರನಾದ ಕೆಲಸ ಮಾಡುವ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ಕಷ್ಟವಾಗುತ್ತಿದೆ
ಹೀಗಾಗಿ ಅವುಗಳ ವಿಲೀನ ಮಾಡಿದರೆ ದಕ್ಷತೆ, ಸಮನ್ವಯತೆ ಹೆಚ್ಚುತ್ತದೆ. ಆಡಳಿತ ವೆಚ್ಚವೂ ಇಳಿಕೆ
ಈ ಕಾರಣಕ್ಕೆ ಕೃಷಿಯಲ್ಲಿ ತೋಟಗಾರಿಕೆ, ರೇಷ್ಮೆ, ನಗರಾಭಿವೃದ್ಧಿಯಲ್ಲಿ ಪೌರಾಡಳಿತ ಇಲಾಖೆ ವಿಲೀನ
ಹೀಗೆ ಇಲಾಖೆ, ನಿಗಮ- ಮಂಡಳಿಗಳ ವಿಲೀನಕ್ಕೆ ಈ ಹಿಂದೆ ದೇಶಪಾಂಡೆ ಆಯೋಗ ವರದಿ ನೀಡಿತ್ತು
ಈ ವರದಿಯಲ್ಲಿ ಅಂಶಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ
ಸದ್ಯ ವಿಲೀನದ ಸಾಧಕ-ಬಾಧಕ, ಕಾನೂನಾತ್ಮಕ ತೊಡಕುಗಳ ಬಗ್ಗೆ ಅಧಿಕಾರಿಗಳ ಪರಿಶೀಲನೆ
ಈ ಕುರಿತು ಅಧಿಕಾರಿಗಳ ವರದಿ ಬಳಿಕ ಅದನ್ನು ಸಂಪುಟದಲ್ಲಿ ಮಂಡಿಸಲು ಸಿಎಂ ಡಿಕೆಶಿ ಒಲವು
ಇತ್ತೀಚೆಗೆ ವಿವಿಧ ಇಲಾಖೆಗಳನ್ನು ವಿಲೀನ ಮಾಡಿ ಪ್ರಜಾಸೇವಾ ಇಲಾಖೆ ರಚಿಸಿದ್ದ ರಾಜ್ಯ ಸರ್ಕಾರ

