ಸಾರಾಂಶ
ಮಂಡ್ಯ ನಗರಸಭೆಯಲ್ಲಿ 17 ಸದಸ್ಯಬಲ ಹೊಂದಿರುವ ಜೆಡಿಎಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಅವಕಾಶವಿದೆ. ಆದರೆ, ಜೆಡಿಎಸ್‌ಗೆ ಆಪರೇಷನ್ ಮಾಡುವುದಕ್ಕೆ ಕಾಂಗ್ರೆಸ್ ಪರೋಕ್ಷವಾಗಿ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ರೋಚಕ ಹಣಾಹಣಿ ಆರಂಭಗೊಂಡಿದೆ.
ಮಂಡ್ಯ : ಎರಡನೇ ಅವಧಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲು ನಿಗದಿಪಡಿಸುತ್ತಿದ್ದಂತೆ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆ ಏರುವುದಕ್ಕೆ ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ನಗರಸಭೆಯಲ್ಲಿ 17 ಸದಸ್ಯಬಲ ಹೊಂದಿರುವ ಜೆಡಿಎಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಅವಕಾಶವಿದೆ. ಆದರೆ, ಜೆಡಿಎಸ್‌ಗೆ ಆಪರೇಷನ್ ಮಾಡುವುದಕ್ಕೆ ಕಾಂಗ್ರೆಸ್ ಪರೋಕ್ಷವಾಗಿ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ರೋಚಕ ಹಣಾಹಣಿ ಆರಂಭಗೊಂಡಿದೆ.
ನಗರಸಭೆ ಅಧ್ಯಕ್ಷ ಸ್ಥಾನ ಕಳೆದ ಬಾರಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದರೆ, ಉಪಾಧ್ಯಕ್ಷ ಸ್ಥಾನವೂ ಹಿಂದುಳಿದ ವರ್ಗ (ಎ)ಗೆ ನಿಗದಿಯಾಗಿತ್ತು. ಆ ಸಮಯದಲ್ಲಿ ಜೆಡಿಎಸ್‌ನಿಂದ ಎಚ್.ಎಸ್.ಮಂಜು ಅಧ್ಯಕ್ಷರಾಗಿ ಇಷ್ರತ್ ಫಾತೀಮಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ೨೦೨೩ರ ಮಾರ್ಚ್ ತಿಂಗಳಲ್ಲಿ ನಗರಸಭೆ ಮೊದಲ ಅವಧಿ ಮುಕ್ತಾಯಗೊಂಡ ಬಳಿಕ ಒಂದೂವರೆ ವರ್ಷ ಚುನಾವಣೆ ನಡೆಯದೆ ನೆನೆಗುದಿಗೆ ಬಿದ್ದಿತ್ತು.
ಇದೀಗ ಘೋಷಣೆಯಾಗಿರುವ ಮೀಸಲಿನಲ್ಲಿ ಅಧ್ಯಕ್ಷ ಸ್ಥಾನ ಮತ್ತೆ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಗೆ ನಿಗದಿಯಾಗಿದೆ. ಈ ಬಾರಿ ಜೆಡಿಎಸ್ ಪಕ್ಷದಿಂದ ಒಂದನೇ ವಾರ್ಡ್‌ನ ನಾಗೇಶ್ ಹಾಗೂ ೩೩ನೇ ವಾರ್ಡ್‌ನ ವಿದ್ಯಾ ಮಂಜುನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಎಚ್.ಎಸ್.ಮಂಜು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಹೋರಾಟ ನಡೆಸುತ್ತಿದ್ದಾರೆ.
ಸದಸ್ಯರ ಬಲಾಬಲ:
ನಗರ ಸಭೆಯಲ್ಲಿ ಜೆಡಿಎಸ್-೧೮, ಕಾಂಗ್ರೆಸ್-೧೦, ಬಿಜೆಪಿ-೨ ಹಾಗೂ ಪಕ್ಷೇತರ-೫ ಸದಸ್ಯರ ಬಲವನ್ನು ಹೊಂದಿತ್ತು. ಎಚ್.ಎಸ್.ಮಂಜು ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್ ಸದಸ್ಯ ಬಲ-೧೭ಕ್ಕೆ ಕುಸಿದಿದೆ. ಜೆಡಿಎಸ್ ಲೆಕ್ಕಾಚಾರವೇನೆಂದರೆ ಮೈತ್ರಿ ಪಕ್ಷ ಬಿಜೆಪಿಯ ಇಬ್ಬರು ಸದಸ್ಯರು, ಪಕ್ಷೇತರರು ಹಾಗೂ ಸಂಸದರ ಮತವನ್ನು ಜೊತೆ ಸೇರಿಸಿಕೊಂಡು ಅಧಿಕಾರ ಹಿಡಿಯುವುದಕ್ಕೆ ಆಲೋಚನೆಯಲ್ಲಿದ್ದಾರೆ.
ಎಚ್.ಎಸ್. ಮಂಜು ಕೈ ಸೇರ್ಪಡೆಯಾದ ಬಳಿಕ ಕಾಂಗ್ರೆಸ್‌ನಲ್ಲಿ ಈಗ ೧೧ ಮಂದಿ ಸದಸ್ಯರಿದ್ದಾರೆ. ಅವರೊಟ್ಟಿಗೆ ೫ ಮಂದಿ ಪಕ್ಷೇತರರು, ಇಬ್ಬರು ಶಾಸಕರು ಜೊತೆಗೆ ಇಬ್ಬರು-ಮೂವರು ಜೆಡಿಎಸ್‌ನವರನ್ನು ಸೆಳೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಸದ್ದಿಲ್ಲದೆ ಒಳಗೊಳಗೆ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಪಕ್ಷೇತರರು ನಿರ್ಣಾಯಕ:
ಈಗಿರುವ ಪರಿಸ್ಥಿತಿಯಲ್ಲಿ ಐವರು ಪಕ್ಷೇತರ ಸದಸ್ಯರೇ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಪಕ್ಷೇತರರ ಬೆಂಬಲ ಅತ್ಯಗತ್ಯವಾಗಿದೆ. ಕಾಂಗ್ರೆಸ್‌ಗೆ ಐವರು ಪಕ್ಷೇತರರ ಜೊತೆಗೆ ಜೆಡಿಎಸ್‌ನ ಎರಡು-ಮೂರು ಸದಸ್ಯರ ಅವಶ್ಯಕತೆ ಇದೆ. ಹೀಗಾಗಿ ಪಕ್ಷೇತರರ ಕೃಪಾಕಟಾಕ್ಷ ಯಾರ ಕಡೆಗೆ ಇರಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಮೊನ್ನೆಯಷ್ಟೇ ಜೆಡಿಎಸ್‌ನ ೧೭ ಸದಸ್ಯರ ಪೈಕಿ ೧೬ ಸದಸ್ಯರು ಬೆಂಗಳೂರಿಗೆ ತೆರಳಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಎಲ್ಲರೂ ಜೊತೆಯಾಗಿದ್ದುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವಂತೆ ತಿಳಿಸಿದ್ದಾರೆ.
ಜೆಡಿಎಸ್‌ಗೆ ಆಪರೇಷನ್:
ಜೆಡಿಎಸ್‌ನಿಂದ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ್ದ ಎಚ್.ಎಸ್.ಮಂಜು ಅವರು ಈಗ ಕಾಂಗ್ರೆಸ್ ಸೇರಿದ್ದು, ಈಗ ಉಳಿದಿರುವ ಒಂದು ವರ್ಷದ ಅವಧಿಗೆ ಅಧಿಕಾರಕ್ಕೇರುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರನ್ನು ಜೊತೆಯಲ್ಲಿಟ್ಟುಕೊಂಡು ಪಕ್ಷೇತರರ ಬಲದೊಂದಿಗೆ ಜೆಡಿಎಸ್‌ನ ಎರಡು-ಮೂರು ಸದಸ್ಯರನ್ನು ಸೆಳೆಯುವ ಸವಾಲು ಎದುರಾಗಿದೆ. ಜೆಡಿಎಸ್‌ನಲ್ಲಿದ್ದ ವೇಳೆ ಎಲ್ಲಾ ಸದಸ್ಯರೊಂದಿಗೆ ವಿಶ್ವಾಸದಿಂದ ಇದ್ದ ಎಚ್.ಎಸ್.ಮಂಜು ಅವರು ಈಗ ಅವರಲ್ಲಿ ಇಬ್ಬರು ಅಥವಾ ಮೂವರನ್ನು ಸೆಳೆದುಕೊಳ್ಳುವುದಕ್ಕೆ ವ್ಯವಸ್ಥಿತ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದರಲ್ಲಿ ಸಫಲರಾದರೆ ಮಾತ್ರ ಮತ್ತೆ ಅಧಿಕಾರದ ಗದ್ದುಗೆ ಏರುವುದಕ್ಕೆ ಸಾಧ್ಯವಾಗಲಿದೆ.
ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಮರ್ಥ ಆಡಳಿತ ನೀಡುವುದರೊಂದಿಗೆ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ತರಕಾರಿ ಮಾರುಕಟ್ಟೆ ನಿರ್ಮಾಣ ಹಾಗೂ ಅಮೃತ ಭವನ ನಿರ್ಮಾಣಕ್ಕೂ ಕಾರಣಕರ್ತರಾಗಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಹಂಬಲದೊಂದಿಗೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೇರುವುದಕ್ಕೆ ಬಯಸಿದ್ದಾರೆ. ಅಧ್ಯಕ್ಷ ಗದ್ದುಗೆ ಹಿಡಿಯಲು ಎಚ್.ಎಸ್.ಮಂಜು ಅವರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್‌ನ ಕೆಲ ಸದಸ್ಯರೂ ಸಾಥ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಎಚ್.ಎಸ್.ಮಂಜು ಅಧ್ಯಕ್ಷರಾಗುವ ವಿಚಾರದಲ್ಲಿ ಕಾಂಗ್ರೆಸ್‌ನ ಕೆಲವು ಸದಸ್ಯರು ಒಳಗೊಳಗೆ ಮುನಿಸು ಪ್ರದರ್ಶಿಸುತ್ತಿದ್ದಾರೆ ಎನ್ನುವ ಮಾತುಗಳೂ ಇವೆ. ಜೆಡಿಎಸ್‌ನಿಂದ ಪಕ್ಷಕ್ಕೆ ಬಂದವರಿಗೆ ಏಕಾಏಕಿ ನಗರಸಭೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷಕ್ಕೆ ದುಡಿದವರಿಗೆ ಬೆಲೆ ಎಲ್ಲಿರುತ್ತದೆ ಎಂಬ ಅಭಿಪ್ರಾಯದಲ್ಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಎಚ್.ಎಸ್.ಮಂಜು ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ವಿಚಾರವಾಗಿ ಸ್ಥಳೀಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸದಸ್ಯರೊಂದಿಗೆ ಮಾತುಕತೆಯನ್ನೂ ನಡೆಸಿರುವುದಾಗಿ ತಿಳಿದುಬಂದಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ನಾಗೇಶ್:
ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ೨೫ನೇ ವಾರ್ಡ್‌ನ ನಾಗೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಳಿದಂತೆ ಬಿಸಿಎಯಿಂದ ಉಳಿದವರು ಪೈಪೋಟಿಗೆ ಮುಂದಾಗಿಲ್ಲವೆಂದು ಹೇಳಲಾಗುತ್ತಿದೆ. ನಾಗೇಶ್ ಕೂಡ ಸದಸ್ಯರೊಂದಿಗೆ ಉತ್ತಮ ವಿಶ್ವಾಸ ಹಾಗೂ ಒಡನಾಟ ಹೊಂದಿರುವುದರಿಂದ ಅವರು ಉಪಾಧ್ಯಕ್ಷ ಹುದ್ದೆಗೇರುವ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಚುನಾವಣಾ ಸಮಯಕ್ಕೆ ಹೊಸ ಅಭ್ಯರ್ಥಿಗಳು ಹುಟ್ಟಿಕೊಂಡರೂ ಅಚ್ಚರಿಯೇನಿಲ್ಲ.