ಭೂಮಿ ವಾಪಸ್‌ ಮಾಡಿ ಖರ್ಗೆ ತಪ್ಪೊಪ್ಪಿಗೆ: ಆರ್‌ಸಿ - ಭೂಕಬಳಿಕೆಯು ಕಾಂಗ್ರೆಸ್‌ ರಾಜವಂಶಜರಿಗೆ ಸರಿ

| Published : Oct 14 2024, 12:16 PM IST

Rajeev Chandrasekhar

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವು ಬೆಂಗಳೂರಿನಲ್ಲಿ ಹಂಚಿಕೆ ಮಾಡಲಾಗಿದ್ದ ಭೂಮಿಯನ್ನು ಸರ್ಕಾರಕ್ಕೆ ಮರಳಿಸುವ ನಿರ್ಣಯ ಕೈಗೊಂಡಿದ್ದನ್ನು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವು ಬೆಂಗಳೂರಿನಲ್ಲಿ ಹಂಚಿಕೆ ಮಾಡಲಾಗಿದ್ದ ಭೂಮಿಯನ್ನು ಸರ್ಕಾರಕ್ಕೆ ಮರಳಿಸುವ ನಿರ್ಣಯ ಕೈಗೊಂಡಿದ್ದನ್ನು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ಭಾನುವಾರ ಟ್ವೀಟ್‌ ಮಾಡಿರುವ ಅವರು, ‘ಖರ್ಗೆ ಸಾಹೇಬರು 11 ಬಾರಿ ಚುನಾಯಿತರಾಗಿದ್ದಾರೆ. ಇದು ಅವರ ಕುಟುಂಬಕ್ಕೆ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸುವ ಹಕ್ಕನ್ನು ನೀಡುತ್ತದೆ ಹಾಗೂ ಇದು ಕಾಂಗ್ರೆಸ್ ಪಕ್ಷದ ಕೆಲವು ರಾಜವಂಶಗಳಿಗೆ ಸರಿ ಎಂದು ತೋರುತ್ತದೆ. ನಾವು ಇದನ್ನು ಹರ್ಯಾಣದಲ್ಲಿಯೂ ನೋಡಿದ್ದೇವೆ. ಆದರೆ ಈ ದೇಶದ ಜನರು ರಾಜಕೀಯ ಕುಟುಂಬಗಳು ಭೂಮಿಯನ್ನು ಕಬಳಿಸುವುದು ಒಂದು ಅಪರಾಧ ಎಂದು ನೋಡುತ್ತಾರೆ’ ಎಂದು ಕಿಡಿಕಾರಿದ್ದಾರೆ.

‘ಇಂದು 5 ಎಕರೆ ಭೂಮಿಯನ್ನು ಹಸ್ತಾಂತರಿಸಿದ್ದೀರಿ. ಇದಕ್ಕೂ ಮುನ್ನ ನಿಮ್ಮ ವಿರುದ್ಧದ ಭೂಕಬಳಿಕೆ ಆರೋಪವನ್ನು‘ಆಧಾರ ರಹಿತ’ ಎಂದು ಹೇಳಿದ್ದಿರಿ. ಆದರೆ ಇಂದು ಭೂಮಿ ಹಸ್ತಾಂತರಿಸುವ ಮೂಲಕ ನಿಮ್ಮ ಹೇಳಿಕೆ ಸರಿಯಾಗಿಲ್ಲ. ಆರೋಪ ನಿಜ ಎಂಬುದನ್ನು ನಿರೂಪಿಸಿದ್ದೀರಿ’ ಎಂದು ರಾಜೀವ್‌ ಚಾಟಿ ಬೀಸಿದ್ದಾರೆ.

ಇನ್ನು ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರಿಗೆ ಚಾಟಿ ಬೀಸಿರುವ ರಾಜೀವ್‌, ‘ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯನ್ನು ಉಗ್ರರ ಪಕ್ಷ ಎಂದಿದ್ದರು. ಅದಕ್ಕೆ ನೀವು ಪ್ರತಿಕ್ರಿಯಿಸಿಲ್ಲ’ ಎಂದೂ ಕುಟುಕಿದ್ದಾರೆ.