ಸಾರಾಂಶ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನಗರದ ಬಂದೀಗೌಡ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನಗರದ ಬಂದೀಗೌಡ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ.
ಸುಮಾರು ₹2.25 ಕೋಟಿ ವೆಚ್ಚದ ಮನೆ ಖರೀದಿಸಿರುವ ಚಂದ್ರು ಅವರು, ಅಲ್ಲೇ ಕಚೇರಿಯನ್ನೂ ಸಹ ತೆರೆದಿದ್ದಾರೆ. ಚುನಾವಣೆ ಮುಗಿಯುವವರೆಗೂ ಕೇಂದ್ರ ಸ್ಥಾನದಲ್ಲೇ ಉಳಿದು ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸಲಿದ್ದಾರೆ. ಆ ನಂತರವೂ ಇಲ್ಲೇ ಉಳಿಯಬೇಕೆಂಬ ಹಂಬಲದೊಂದಿಗೆ ಮನೆಯನ್ನು ಖರೀದಿಸಿರುವುದಾಗಿ ತಿಳಿದುಬಂದಿದೆ.
ಸಂಸದರಾಗಿದ್ದ ರಮ್ಯಾ ಅವರು ವಿದ್ಯಾನಗರದಲ್ಲಿರುವ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಸುಮಲತಾ ಮಂಡ್ಯ ತಾಲೂಕು ಹನಕೆರೆ ಸಮೀಪ ಮನೆ ಕಟ್ಟುವುದಕ್ಕೆ ಜಾಗ ಗುರುತಿಸಿದ್ದರು.
ಸ್ಥಳ ವಿವಾದದಿಂದ ಅರ್ಧಕ್ಕೇ ನಿಂತುಹೋಯಿತು. 2019ರ ಚುನಾವಣೆಗೆ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಮಂಡ್ಯ ಹೊರ ವಲಯದಲ್ಲಿ ಫಾರ್ಮ್‌ಹೌಸ್ ಮಾಡುವುದಾಗಿ ಹೇಳಿದ್ದರು. ಆದರೆ, ಅವರ ಸೋಲಿನ ನಂತರ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.
ಎರಡು ಬಾರಿ ಕೆಳಗೆ ಬಿದ್ದ ಹೂ: ಗೃಹಪ್ರವೇಶ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪ ದೇವರ ಪೂಜೆ ವೇಳೆ ತಾವರೆ ಹೂ ಎರಡು ಬಾರಿ ಬಲಭಾಗದಿಂದ ಕೆಳಗೆ ಬಿದ್ದಿತು. ಅದನ್ನು ಅರ್ಚಕರು ಚಂದ್ರು ಅವರಿಗೆ ನೀಡಿ ಶುಭ ಹಾರೈಸಿದರು.
ಇದರೊಂದಿಗೆ ಮಂಡ್ಯ ತಾಲೂಕು ಸಾತನೂರು- ಅಸಿಟೇಟ್ ಟೌನ್ ನಡುವಿನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲೂ ಸ್ಟಾರ್ ಚಂದ್ರು ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲೂ ಕೂಡ ಅವರಿಗೆ ಶುಭ ಸೂಚನೆ ದೊರೆಯಿತು. ದೇವರ ಮೂರ್ತಿಗೆ ಹಾಕಿದ್ದ ಕಜ್ಜಾಯ ಹಾರದಿಂದ ಕಜ್ಜಾಯವೊಂದು ಕೆಳಗೆ ಬಿದ್ದಿತು. ಅದನ್ನು ಚಂದ್ರು ಅವರಿಗೆ ಅರ್ಚಕರು ತಿನ್ನಿಸಿ, ಎಲ್ಲವೂ ಒಳ್ಳೆಯದಾಗಲಿದೆ ಎಂದು ಆಶೀರ್ವದಿಸಿದರು.