ಮತದಾರರಿಗೆ ನೀಡಿದ ಭರವಸೆ ಈಡೇರಿಸಲು ಕಾಂಗ್ರೆಸ್‌ ಬದ್ಧ: ಮನ್ಸೂರ್‌

| Published : Apr 16 2024, 02:06 AM IST / Updated: Apr 16 2024, 04:35 AM IST

ಸಾರಾಂಶ

ಮತದಾರ ಪ್ರಭುಗಳಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್‌ ಪಕ್ಷವು ಬದ್ಧವಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‌ ಹೇಳಿದ್ದಾರೆ.

 ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ಸೋಮವಾರ ಸಿ.ವಿ. ರಾಮನ್‌ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದರು. ಹೈಕೋರ್ಟ್‌ ಮತ್ತು ಸಿಟಿ ಸಿವಿಲ್ ಕೋರ್ಟ್‌ಗೆ ತೆರಳಿ ವಕೀಲರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.

ಸಿ.ವಿ.ರಾಮನ್ ನಗರ ವ್ಯಾಪ್ತಿಯ ಕಲ್ಲಹಳ್ಳಿ, ಹಳೇ ಬೈಯಪ್ಪನಹಳ್ಳಿ, ಗಂಗಮ್ಮ ದೇವಸ್ಥಾನ ಮತ್ತು ದೊಡ್ಡಿಗುಂಟ ಸರ್ಕಲ್‌ನಲ್ಲಿ ಪ್ರಚಾರ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಜನರ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ. ಕ್ಷೇತ್ರದ ಜನರ ಉತ್ಸಾಹ ಮತ್ತು ಅಭೂತಪೂರ್ವ ಬೆಂಬಲವೇ ನನ್ನ ಗೆಲುವಿನ ಶ್ರೀರಕ್ಷೆ. ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ನಂದಕುಮಾರ್, ಎಸ್‌. ಆನಂದ್‌ ಕುಮಾರ್‌, ಬ್ಲಾಕ್ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಕಾಂಗ್ರೆಸ್‌ ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.ವಕೀಲರ ಜೊತೆ ಸಂವಾದ, ಮತಯಾಚನೆ

ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ಕೋರ್ಟ್‌ ಆವರಣಕ್ಕೆ ಭೇಟಿ ನೀಡಿದ ಮನ್ಸೂರ್ ಅಲಿ ಖಾನ್, ವಕೀಲರೊಂದಿಗೆ ಸಂವಾದ ನಡೆಸಿ ಮತಯಾಚನೆ ಮಾಡಿದರು.

ವಕೀಲ ವೃತ್ತಿ ಸಾಮಾಜಿಕ ಕಾಳಜಿ, ಕಷ್ಟದಲ್ಲಿರುವವರ ಕಣ್ಣೊರೆಸುವ ಪವಿತ್ರ ವೃತ್ತಿ ಆಗಿದೆ. ವಕೀಲರಿಗೆ ಸಮಾಜದಲ್ಲಿ ಅತ್ಯಂತ ಗೌರವವಿದೆ ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡುತ್ತಾ ಉತ್ತಮ ಸಮಾಜ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದು ಮತಯಾಚನೆ ಮಾಡಿದರು.

ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ, ಉತ್ತರ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ, ಶಾಸಕರಾದ ಎ.ಎಸ್.ಪೊನ್ನಣ್ಣ, ರಮೇಶ್ ಬಾಬು, ಸೂರ್ಯ ಮುಕುಂದರಾಜ್ ಮುಂತಾದವರು ಉಪಸ್ಥಿತರಿದ್ದರು.ಹಲವೆಡೆ ಪ್ರಚಾರ

ಕಾಕ್ಸ್‌ಟೌನ್ ಫ್ಲೈಓವರ್, ಪೊಲುರಾಮ್ ಹೌಸಿಂಗ್, ಪಿಎಸ್‌ಕೆ ನಾಯ್ಡು ರಸ್ತೆ, ಕದಿರನಪಾಳ್ಯ, ಆಂಧ್ರ ಕಾಲೋನಿ, ಕಥಲಿಪಾಳ್ಯ, ಸದಾನಂದ ನಗರ, ಕಸ್ತೂರಿ ನಗರ, ಚನ್ನಸಂದ್ರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಕರ್ತರೊಂದಿಗೆ ಮನ್ಸೂರ್ ಖಾನ್ ಮತಯಾಚನೆ ಮಾಡಿದರು.

ಶಿಕ್ಷಣ, ಆರೋಗ್ಯ, ಪರಿಸರಕ್ಕೆ ಒತ್ತು

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಬದ್ಧತೆಯಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳನ್ನು ಎಲ್ಲ ಕಡೆ ನಿರ್ಮಿಸಬೇಕು. ಜಿಡಿಪಿಯ ಶೇ.6ರಷ್ಟು ಮೊತ್ತವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. 25 ಲಕ್ಷ ರು. ಮೊತ್ತದ ಆರೋಗ್ಯ ವಿಮೆ, ಬೆಂಗಳೂರಿನ ಶ್ವಾಸಕೋಶವಾಗಿರುವ ಹಸಿರನ್ನು ಮರುಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ನಗರದ ಹಸಿರೀಕರಣಕ್ಕಾಗಿ ಕೆಲಸ ಮಾಡಲು ಬದ್ಧವಾಗಿದ್ದೇನೆ. ನಗರದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಮನ್ಸೂರ್ ಅಲಿಖಾನ್ ಹೇಳಿದರು.