ಸಾರಾಂಶ
ಬೆಂಗಳೂರು : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಶನಿವಾರದಿಂದ ನಡೆಯಲಿರುವ ‘ಮೈಸೂರು ಚಲೋ’ಗೆ ಸಡ್ಡು ಹೊಡೆದಿರುವ ಕಾಂಗ್ರೆಸ್, ಪಾದಯಾತ್ರೆಗೂ ಒಂದು ದಿನ ಮೊದಲೇ ಬಿಡದಿಯಲ್ಲಿ ಶುಕ್ರವಾರ ಸರಣಿ ಸಮಾವೇಶಕ್ಕೆ ಚಾಲನೆ ನೀಡಿದೆ.
ಶನಿವಾರ ರಾಮನಗರದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಲಿದ್ದಾರೆ. ಬಳಿಕ, ಆ.4ರಂದು ಚನ್ನಪಟ್ಟಣ, ಆ.5ರಂದು ಮದ್ದೂರು, ಆ.6ರಂದು ಮಂಡ್ಯ ಹಾಗೂ ಆ.9ರಂದು ಮೈಸೂರಿನಲ್ಲಿ ಸಮಾವೇಶಗಳು ಆಯೋಜನೆಯಾಗಿವೆ.
ಬಿಡದಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅವರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಚರ್ಚೆಗೆ ಪಂಥಾಹ್ವಾನ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಡಿಕೆಶಿ, ಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಿಗಳಿಗೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆಯಿದು ಎಂದು ಬಿಜೆಪಿ ಪಾದಯಾತ್ರೆಯನ್ನು ಲೇವಡಿ ಮಾಡಿದರು.
ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜನತಾದಳವನ್ನು ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕುಟುಕಿದರು.
ಇಂದು ಸಿಎಂ ಎಂಟ್ರಿ: ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜೆಪಿಯ 21 ಹಗರಣಗಳ ವಿರುದ್ಧ ಜನಾಂದೋಲನಕ್ಕೆ ಮುಂದಾಗಿರುವ ಕಾಂಗ್ರೆಸ್, ಸರಣಿ ಸಮಾವೇಶಗಳನ್ನು ನಡೆಸುತ್ತಿದೆ. ಬಿಜೆಪಿಯ ಪಾದಯಾತ್ರೆ ಸಾಗುವ ಮಾರ್ಗದ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಸಮಾವೇಶಗಳನ್ನು ನಡೆಸಲು ನಿರ್ಧರಿಸಿದ್ದು, ಸಮಾವೇಶಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಕುರಿತಂತೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ.