ಸಾರಾಂಶ
ನಾಗಮಂಗಲ : ರಾಜ್ಯದಲ್ಲಿ ಕಾಂಗ್ರೆಸ್ ಹನುಮನನ್ನು ವಿಲನ್ ಮಾಡಿ ಆಗಿದೆ. ಇದೀಗ ಗಣೇಶನ ಕಂಡರೂ ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಈಗ ಗಣೇಶನ ಮೇಲೂ ವಕ್ರದೃಷ್ಟಿ ಬೀರಿದೆ. ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಗಲಭೆ ನಡೆದ ಪಟ್ಟಣಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆರಗೋಡಿನಲ್ಲಿ ಏಕಾಏಕಿ ಹನುಮ ಧ್ವಜ ಇಳಿಸಿದರು. ಬಳಿಕ ರಾಜ್ಯ ಪೂರ್ತಿ ಹನುಮ ಧ್ವಜ ಇಳಿಸಿದರು. ಈಗ ಗಣೇಶನನ್ನು ಟಾರ್ಗೆಟ್ ಮಾಡಿಕೊಂಡು ಗಲಭೆ ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾನೂನು ಹಾಗೂ ಸರ್ಕಾರ ನಮಗೆ ಏನೂ ಮಾಡಲ್ಲ ಎಂದು ಅವರ ತಲೆಗೆ ಬಂದಿದೆ. ಮಚ್ಚು ಲಾಂಗ್ ಹಿಡಿದುಕೊಂಡು ಶಿವಮೊಗ್ಗದಲ್ಲಿ ಓಡಾಡಿದವರಿಗೇ ಏನೂ ಮಾಡಲಿಲ್ಲ. ಇದೆಲ್ಲ ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಪಟ್ಟಣದಲ್ಲಿ ಗಲಾಟೆಯಾಗಿದೆ. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟೂ ಪರಿಜ್ಞಾನವಿಲ್ಲವೇ. ಏನ್ ಕತ್ತೆ ಕಾಯ್ತಿದ್ರಾ ಪೊಲೀಸರು ಎಂದು ಖಾರವಾಗಿ ಪ್ರಶ್ನಿಸಿದರು.
ಪರಿಸ್ಥಿತಿಯನ್ನು ಅವಲೋಕಿಸದೆ ರಾಜ್ಯದ ಹೋಮ್ ಮಿನಿಸ್ಟಿರ್ ಸಣ್ಣ ಘಟನೆ ಅಂತಾರೆ. ಪೆಟ್ರೋಲ್ ಬಾಂಬ್ ಹಾಕಿರೋದು ಅವರಿಗೆ ಸಣ್ಣ ಘಟನೆ. ಮಿಸೆಲ್, ರಾಕೇಟ್ ಹಾಕಿದರಷ್ಟೇ ಅವರಿಗೆ ದೊಡ್ಡ ಘಟನೆ. ಇದು ಪೂರ್ವ ನಿಯೋಜಿತ ಕೃತ್ಯ. ಮಸೀದಿಯಲ್ಲಿ ಪ್ಲಾನ್ ಮಾಡಿ ಗಲಭೆ ಸೃಷ್ಟಿಸಿದ್ದಾರೆ. ಮಂಡ್ಯದಲ್ಲಿ ಗಣಪತಿ ಹಬ್ಬ ನಡೆಯಬಾರದು ಎನ್ನುವುದೇ ಅವರ ಪ್ಲಾನ್. ಅದಕ್ಕಾಗಿ ಕುತಂತ್ರ ಮಾಡಿ ಈ ಕೃತ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹಲ್ಲೆ ಮಾಡಿದ್ದು ಮುಸ್ಲಿಂ ಟೆರೆರಿಸ್ಟ್‌ಗಳು, ರೌಡಿಗಳು ಎಂದು ಏರುದನಿಯಲ್ಲಿ ಹೇಳಿದ ಅಶೋಕ್, ಈ ಕೃತ್ಯದಲ್ಲಿ ಅಂಗಡಿ-ಮುಂಗಟ್ಟು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.