ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ನಾಯಕರಿಂದಲೇ ಈ ವರದಿ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕ ಪುಟ್ಟರಂಗಶೆಟ್ಟಿ ಅವರು ಸ್ವಾಗತಿಸಿದ್ದರೆ, ಸಚಿವರಾದ ಎಂ.ಬಿ.ಪಾಟೀಲ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ವರದಿಯ ಬಗ್ಗೆ ಕೆಲವು ಸಂದೇಹಗಳು ಇವೆ. ವೀರಶೈವ ಲಿಂಗಾಯತರಲ್ಲಿ ಹಿಂದುಳಿದವರು ಮೀಸಲಾತಿ ಪಡೆದುಕೊಳ್ಳಲು 2ಎ ಜಾತಿಯಲ್ಲಿ ಬರುವ ಹಿಂದೂ ಗಾಣಿಗ, ಸಾದರ, ಬಣಜಿಗ, ರೆಡ್ಡಿ ಎಂದು ಬರೆಸಿರುತ್ತಾರೆ.
ಆದರೆ, ಅವರನ್ನೆಲ್ಲ ಒಂದೇ ಸೂರಿನಲ್ಲಿ ತೆಗೆದುಕೊಳ್ಳಬೇಕು ಎಂದು ನಮ್ಮ ಬೇಡಿಕೆ ಇದೆ. ಆ ರೀತಿ ಮಾಡಿದರೆ ನಮಗೆ ತೊಂದರೆ ಇಲ್ಲ ಎಂದು ಈಗಾಗಲೇ ಹೇಳಿದ್ದೇವೆ ಎಂದರು.
ಸಚಿವೆ ಹೆಬ್ಬಾಳ್ಕರ್ ಅವರು, ಜನಸಂಖ್ಯೆ ಆಧಾರದ ಮೇಲೆ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಗಣತಿ ಮಾಡಲಾಗುತ್ತದೆ.
ಆದರೆ, ಈ ಸಮೀಕ್ಷೆ ಮಾಡುವಾಗ ಕೆಲವೆಡೆ ಮಾಹಿತಿ ಸಂಗ್ರಹಿಸಲಾಗಿದ್ದು, ಮತ್ತೆ ಕೆಲವೆಡೆ ಹೋಗಿಯೇ ಇಲ್ಲ. ನಮ್ಮ ವೀರಶೈವ ಲಿಂಗಾಯತರಲ್ಲಿ 103 ಒಳಪಂಗಡಗಳು ಇವೆ.
ಅವರೆಲ್ಲರೂ ಬೇರೆ ಬೇರೆ ಜಾತಿ ಬರೆಸಿದ್ದಾರೆ. ಹೀಗಾಗಿ, ಇನ್ನೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು. ಅದಕ್ಕೆ ಕಾಲಾವಕಾಶ ಕೊಡಬೇಕು ಎಂದು ಮನವಿ ಮಾಡುತ್ತೇನೆ.
ಈ ವಿಚಾರವನ್ನು ರಾಜಕೀಯವಾಗಿ ನೋಡುತ್ತಿದ್ದೇವೆ ಎಂದು ಹೇಳಿದರು. ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಇದು ಜಾತಿಗಣತಿ ವರದಿ ಅಲ್ಲ.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ವರದಿ. ಈ ವರದಿಗೆ ಯಾರ ವಿರೋಧವೂ ಇಲ್ಲ ಎಂದಿದ್ದಾರೆ.ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಈಗಾಗಲೇ ವೀರಶೈವ ಲಿಂಗಾಯತ ಮಹಾಸಭೆ ಮೂಲಕ ಸಚಿವರು, ಶಾಸಕರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವರದಿ ಜಾರಿ ಮಾಡಬಾರದು ಎಂದು ಮನವಿ ಮಾಡಿದ್ದೇವೆ.
ಈ ಕುರಿತು ಮತ್ತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಕಾದು ನೋಡುತ್ತೇವೆ ಎಂದು ಹೇಳಿದರು.ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಅವರು ವರದಿಯನ್ನು ಸ್ವಾಗತಿಸಿದ್ದಾರೆ.
ವರದಿಯನ್ನು ಸ್ವೀಕರಿಸಿ ಅದರ ಪ್ರಕಾರ ಹಿಂದುಳಿದ ಸಮುದಾಯಗಳಿಗೆ ಸರ್ಕಾರ ನ್ಯಾಯ ಕೊಡಲಿ ಎಂದು ಹೇಳಿದ್ದಾರೆ.ಶಾಸಕ ವಿನಯ್ ಕುಲಕರ್ಣಿ, ನಾವು ಜಾತಿ ಗಣತಿ ಪರವಾಗಿದ್ದೇವೆ.
ಆದರೆ, ನಮ್ಮ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ಮಾಹಿತಿ ಅವೈಜ್ಞಾನಿಕವಾಗಿದೆ. ಹೀಗಾಗಿ, ವೈಜ್ಞಾನಿಕವಾಗಿರಬೇಕು ಎಂಬುದು ನಮ್ಮ ಅಭಿಪ್ರಾಯ.
ಅನೇಕ ಉಪ ಪಂಗಡಗಳು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಮೀಸಲಾತಿಗಾಗಿ ಜಾತಿ ಹೆಸರನ್ನು ಮಾತ್ರ ನಮೂದಿಸಿರುವ ಕಾರಣ ಲಿಂಗಾಯತ ಮಿಸ್ ಆಗಿದೆ.
ಹೀಗಾಗಿ, ಲಿಂಗಾಯತ ಸಹಿತವಾಗಿ ಜಾತಿ ಇರಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದ್ದಾರೆ.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಸಂಪುಟದ ಉಪಸಮಿತಿಯಿಂದ ಅಧ್ಯಯನಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ.
ಯಾರು ಪರ ಮತ್ತು ವಿರೋಧ ಇದ್ದಾರೆ ಎಂಬುದನ್ನು ನೋಡುತ್ತೇವೆ. ಕಾನೂನಿನ ಸಲಹೆ ಪಡೆಯಬೇಕಾ ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.