ಸಾರಾಂಶ
ಕಾಂಗ್ರೆಸ್ ಶಾಸಕರಿಗೆ ಸ್ಪಂದಿಸದ ಸಚಿವರ ಅಸಹಕಾರ, ನಿರ್ಲಕ್ಷ್ಯ ಧೋರಣೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮುಂದೆ ಸ್ವಪಕ್ಷೀಯ ಶಾಸಕ ದೂರುಗಳ ಸುರಿಮಳೆ
ಬೆಂಗಳೂರು : ಕಾಂಗ್ರೆಸ್ ಶಾಸಕರಿಗೆ ಸ್ಪಂದಿಸದ ಸಚಿವರ ಅಸಹಕಾರ, ನಿರ್ಲಕ್ಷ್ಯ ಧೋರಣೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮುಂದೆ ಸ್ವಪಕ್ಷೀಯ ಶಾಸಕರೇ ದೂರುಗಳ ಸುರಿಮಳೆಗೈದಿದ್ದು, ಮುಖ್ಯವಾಗಿ ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿ.ಆರ್. ಪಾಟೀಲ್, ರಾಜು ಕಾಗೆ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹಾಗೂ ಶಾಸಕರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆನ್ನಲ್ಲೇ ಸೋಮವಾರ ರಾಜ್ಯಕ್ಕೆ ಆಗಮಿಸಿರುವ ಸುರ್ಜೇವಾಲಾ ಮೊದಲಿಗೆ ಬಿ.ಆರ್. ಪಾಟೀಲ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಈ ವೇಳೆ ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದ ಬಗ್ಗೆ ವಿವರಣೆ ಪಡೆದರು. ಬಿ.ಆರ್. ಪಾಟೀಲ್ ಅವರ ದೂರುಗಳ ಬಗ್ಗೆ ದಾಖಲು ಮಾಡಿಕೊಂಡು, ಈ ಸಮಸ್ಯೆಯನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಡಲಾಗುವುದು. ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಬಿಜೆಪಿಗೆ ಅಸ್ತ್ರ ನೀಡಬೇಡಿ ಎಂದು ಮನವೊಲಿಸಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ರಾಜೀನಾಮೆ ಎಚ್ಚರಿಕೆ ನೀಡಿದ್ದ ರಾಜು ಕಾಗೆ ಅವರಿಗೂ ಪ್ರತ್ಯೇಕವಾಗಿ ಚರ್ಚಿಸಲು ಸಮಯಾವಕಾಶ ಮಾಡಿಕೊಡಲಾಗಿತ್ತಾದರೂ ಅವರು ಬಂದಿರಲಿಲ್ಲ. ಹೀಗಾಗಿ ಮಂಗಳವಾರ ಅಥವಾ ಬುಧವಾರ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.
ಸಚಿವರ ವಿರುದ್ಧ ಶಾಸಕರ ಆಕ್ರೋಶ:
ಶಾಸಕರು ಸುರ್ಜೇವಾಲಾ ಅವರೊಂದಿಗೆ ಮಾತನಾಡುವ ವೇಳೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ದೂರುಗಳ ಮಳೆ ಸುರಿಸಿದರು. ಪಕ್ಷದ ಶಾಸಕರಿಗೆ ಸಚಿವರು ಬೆಲೆ ನೀಡುತ್ತಿಲ್ಲ. ಪಕ್ಷದ ಶಾಸಕರ ಬದಲಿಗೆ ಬೇರೆಯವರಿಗೆ ಅನುಕೂಲ ಮಾಡಿಕೊಡುತ್ತಾರೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಿಲ್ಲ. ಕನಿಷ್ಠ ಸಚಿವರನ್ನು ಭೇಟಿ ಮಾಡುವುದೇ ಕಷ್ಟ ಎಂಬಂತಾಗಿದೆ. ನಮ್ಮ ಪತ್ರ, ಶಿಫಾರಸುಗಳಿಗೆ ಸಚಿವರು ಕಿಮ್ಮತ್ತು ನೀಡುವುದಿಲ್ಲ. ನಮ್ಮ ಕ್ಷೇತ್ರಗಳಲ್ಲಿನ ಅಧಿಕಾರಿಗಳ ವರ್ಗಾವಣೆ, ಅನುದಾನದ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ದೂರು ನೀಡಿದರೂ ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸಚಿವರು ಮೃದುಧೋರಣೆ ಮುಂದುವರೆಸಿದ್ದಾರೆ. ಹೀಗಾದರೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ನೀಡುತ್ತಾರಾ? ನಮ್ಮ ಗೌರವ ಕಳೆಯುವ ಕೆಲಸವನ್ನು ಸಚಿವರೇ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ. ಶಾಸಕರು ನೀಡಿರುವ ಮಾಹಿತಿ ಹಾಗೂ ಉತ್ತರಗಳನ್ನು ಸಂಪೂರ್ಣವಾಗಿ ಲಿಖಿತವಾಗಿ ಸುರ್ಜೇವಾಲಾ ದಾಖಲಿಸಿಕೊಂಡರು ಎಂದು ತಿಳಿದುಬಂದಿದೆ.
ನೀವೇನು ಸಾಧನೆ ಮಾಡಿದ್ದೀರಿ? - ಸುರ್ಜೇವಾಲಾ:
ಸಿದ್ಧ ಪ್ರಶ್ನಾವಳಿ ಜತೆ ಬಂದಿದ್ದ ಸುರ್ಜೇವಾಲಾ ಅವರು ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿನ ಸಾಧನೆಗಳ ಬಗ್ಗೆಯೂ ಸರಣಿ ಪ್ರಶ್ನೆ ಕೇಳಿದರು. ಕೇವಲ
ತಮ್ಮ ಅಹವಾಲು ಆಲಿಸಲು ಸಭೆ ಕರೆದಿದ್ದಾರೆ ಎಂಬ ಉದ್ದೇಶದಲ್ಲಿ ತೆರಳಿದ್ದ ಶಾಸಕರಿಗೂ ಚುರುಕು ಮುಟ್ಟಿಸಿದರು. ಪ್ರಶ್ನಾವಳಿಯಲ್ಲಿ ಎರಡೂವರೆ ವರ್ಷದಲ್ಲಿ ನಿಮ್ಮ ಸಾಧನೆ ಏನು? ಕ್ಷೇತ್ರದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ? ಇನ್ನೂ ಏನೆಲ್ಲಾ ಕೆಲಸಗಳು ಆಗಬೇಕಿದೆ? ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಬಾಕಿ ಇದ್ದರೆ ಅದಕ್ಕೆ ಕಾರಣಗಳೇನು? ಎಂದು ಪ್ರಶ್ನಿಸಿದ್ದಾರೆ.
ಜತೆಗೆ ಜಿಲ್ಲಾ ಉಸ್ತುವಾರಿಗಳು ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿದ್ದಾರೆಯೇ? ಇಲಾಖಾವಾರು ಅನುದಾನ ತಾರತಮ್ಯ ಆಗಿದೆಯೇ? ಗ್ಯಾರಂಟಿ ಅನುಷ್ಠಾನದಲ್ಲಿ ಸರ್ಕಾರದಿಂದ ಏನಾದರೂ ಸಮಸ್ಯೆ ಆಗಿದೆಯೇ? ಸಚಿವರ ನಡವಳಿಕೆ ಹೇಗಿದೆ? ನಡವಳಿಕೆಗಳಲ್ಲಿ ಏನಾದರೂ ಬದಲಾವಣೆ ಆಗಬೇಕಾ? ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರ್ಯವೈಖರಿ ಹೇಗಿದೆ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಎಲ್ಲ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರ ಪಡೆದು ದಾಖಲಿಸಿಕೊಂಡಿದ್ದಾರೆ. ಮಂಗಳವಾರ ಹಾಗೂ ಬುಧವಾರವೂ ಶಾಸಕರೊಂದಿಗಿನ ಸಭೆ ಮುಂದುವರೆಯಲಿದೆ.
ಸುರ್ಜೇವಾಲಾ ಪ್ರಶ್ನೆ ಕೇಳಿ
ಮೀಟರ್ ಆಫ್ ಆಯ್ತು:
ಕೊತ್ತೂರು ಮಂಜುನಾಥ್‌ನಾವು ಅಂದುಕೊಂಡಿದ್ದೇ ಒಂದು. ಸುರ್ಜೇವಾಲಾ ಅವರು ಕೇಳಿದ್ದೇ ಒಂದು. ಸರ್ಕಾರದ ಅನುದಾನ, ಸಚಿವರ ಮೇಲೆ ದೂರುಗಳು ಏನಾದರೂ ಇದೆಯೇ ಎಂದು ಕೇಳುತ್ತಾರೆ ಎಂದು ನಿರೀಕ್ಷಿಸಿ ಹೋಗಿದ್ದೆವು. ಆದರೆ ಮೊದಲು ಕೇಳಿದ ಪ್ರಶ್ನೆಯೇ ನೀವು ನಿಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದೀರಿ ಎಂಬುದು. ಜನರು ಓಟು ಹಾಕಿದ್ದಾರೆ, ನೀವು ಏನು ಮಾಡಿದ್ದೀರಾ? ಇನ್ನೂ ಏನು ಮಾಡಬೇಕಿದೆ? ಎಂದು ಕೇಳಿದರು. ಅವರ ಮೊದಲ ಪ್ರಶ್ನೆ ಕೇಳಿ ಮೀಟರ್ ಆಫ್ ಆಯಿತು. ಬಳಿಕ ನನ್ನ ಸಾಧನೆ ತಿಳಿಸಿ ಬಂದಿದ್ದೇನೆ.- ಕೊತ್ತೂರು ಜಿ. ಮಂಜುನಾಥ್, ಕೋಲಾರ ಶಾಸಕ.===ಕೆಲ ಸಚಿವರು ನಾ ನಿನಗೆ-ನೀ ನನಗೆ ಎಂಬಂತೆ ವರ್ತಿಸುತ್ತಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಹೇಳಿದ್ದೇನೆ. ನನ್ನ ಬಗ್ಗೆ ನಂಜೇಗೌಡ ದೂರು ನೀಡುವುದಾದರೆ ನೀಡಲಿ. ಅವರೇನು ಹುಲಿಯೋ ಅಥವಾ ಸಿಂಹವೋ ಅಲ್ಲ. ಅವರು ಜೆಡಿಎಸ್‌ನಿಂದ ಬಂದವರು. ನಾನು ಹುಟ್ಟಾ ಕಾಂಗ್ರೆಸಿಗ. ಕೋಲಾರ ಹಾಲು ಒಕ್ಕೂಟ ಚುನಾವಣೆಯಿಂದ ಹಿಡಿದು ಎಲ್ಲವನ್ನೂ ಸುಜೇವಾಲಾ ಗಮನಕ್ಕೆ ತಂದಿದ್ದೇನೆ.
- ಎಸ್.ಎನ್. ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ.
ಎಲ್ಲವನ್ನೂ ತಿಳಿಸಿದ್ದೇವೆ:
ಪಕ್ಷದ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿತ್ತು. ಎಲ್ಲಾ ವಿಚಾರವನ್ನೂ ತಿಳಿಸಿದ್ದೇವೆ. ಯಾವ್ಯಾವ ವಿಚಾರ ಎಲ್ಲೆಲ್ಲಿ ಮಾತನಾಡಬೇಕು ಅಲ್ಲೇ ಮಾತನಾಡಬೇಕು. ಶಾಸಕರಿಗೆ ಸಮಸ್ಯೆಗಳಿವೆ ಇಲ್ಲ ಅನ್ನೋದಿಲ್ಲ. ಕೆಲವು ಸಿಎಂ, ಡಿಸಿಎಂ ಹಂತದಲ್ಲೇ ಪರಿಹಾರ ಆಗುತ್ತವೆ. ಅಂತಹವರು ಅಲ್ಲೇ ಹೇಳಿದ್ದೇವೆ. ಇಲ್ಲಿ ಹೇಳಬೇಕಿದ್ದನ್ನು ಸುರ್ಜೇವಾಲಾ ಅವರ ಮುಂದೆ ಹೇಳಿದ್ದೇವೆ.
- ರೂಪಾ ಶಶಿಧರ್, ಕೆಜಿಎಫ್ ಶಾಸಕರು
ಶಾಸಕರ ಸಿಟ್ಟೇನು?
1. ಶಾಸಕರಿಗೆ ಸಚಿವರು ಬೆಲೆ ನೀಡುತ್ತಿಲ್ಲ. ಶಾಸಕರ ಬದಲು ಬೇರೆಯವರಿಗೆ ಅನುಕೂಲ ಮಾಡಿಕೊಡುತ್ತಾರೆ
2. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಿಲ್ಲ. ಮಂತ್ರಿಗಳನ್ನು ಭೇಟಿ ಮಾಡುವುದೇ ಕಷ್ಟ. ಪತ್ರಗಳಿಗೆ ಕಿಮ್ಮತ್ತು ಇಲ್ಲ3. ಅಧಿಕಾರಿಗಳ ವರ್ಗಾವಣೆ, ಅನುದಾನದ ವಿಚಾರದಲ್ಲಿ ಉಸ್ತುವಾರಿ ಸಚಿವರು ಸರ್ವಾಧಿಕಾರಿಗಳಂತಾಡುತ್ತಾರೆ
4. ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಾರೆ ಎಂದು ದೂರು ನೀಡಿದರೆ ಅಧಿಕಾರಿಗಳ ಪರ ಒಲವು ತೋರುತ್ತಾರೆ
5. ಹೀಗಾದರೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ಕೊಡ್ತಾರಾ? ನಮ್ಮ ಗೌರವವನ್ನು ಸಚಿವರೇ ಕಳೀತಿದ್ದಾರೆ
6. ರಾಜ್ಯ ಉಸ್ತುವಾರಿ ಸುರ್ಜೇವಾಲಾ ನಡೆಸಿದ ಮುಖಾಮುಖಿ ಪ್ರತ್ಯೇಕ ಸಭೆಯಲ್ಲಿ ಶಾಸಕರಿಂದ ಚಾರ್ಜ್‌ಶೀಟ್
ಶಾಸಕರಿಗೆ ರಾಜ್ಯ
ಉಸ್ತುವಾರಿ ಶಾಕ್!
ಅಹವಾಲು ಹೇಳಿಕೊಳ್ಳಲು ಬಂದಿದ್ದ ಶಾಸಕರಿಗೆ ಉಸ್ತುವಾರಿ ಸುರ್ಜೇವಾಲಾ ಚುರುಕು ಮುಟ್ಟಿಸಿದರು. ಕ್ಷೇತ್ರದಲ್ಲಿ ನಿಮ್ಮ ಸಾಧನೆ ಏನು? ಏನೇನು ಮಾಡಿದ್ದೀರಿ? ಎಂದೆಲ್ಲಾ ಪ್ರಶ್ನೆ ಮಾಡಿದರು. ಈ ಅನಿರೀಕ್ಷಿತ ಪ್ರಶ್ನೆಗಳಿಂದ ಶಾಸಕರು ಅವಾಕ್ಕಾದರು.
ಬಿ.ಆರ್.ಪಾಟೀಲ್ ದೂರು ದಾಖಲು!
ವಸತಿ ಪಡೆಯಲು ಹಣ ನೀಡಬೇಕೆಂಬ ಆರೋಪ ಮಾಡಿದ್ದ ಶಾಸಕ ಬಿ.ಆರ್. ಪಾಟೀಲ್ ಜತೆ ಸುರ್ಜೇವಾಲಾ ಪ್ರತ್ಯೇಕ ಚರ್ಚೆ ನಡೆಸಿದರು. ಅವರ ದೂರು ದಾಖಲಿಸಿಕೊಂಡ ಸುರ್ಜೇವಾಲಾ, ಬಹಿರಂಗ ಹೇಳಿಕೆ ನೀಡಿ ಬಿಜೆಪಿಗೆ ಅಸ್ತ್ರ ನೀಡಬೇಡಿ ಎಂದು ಸೂಚಿಸಿದರು. ರಾಜೀನಾಮೆ ಬಾಂಬ್ ಹಾಕಿದ್ದ ಶಾಸಕ ರಾಜು ಕಾಗೆ ಸೋಮವಾರ ಸುರ್ಜೇವಾಲಾ ಭೇಟಿಗೆ ಬಂದಿರಲಿಲ್ಲ.
ಮೀಟರ್ ಆಫ್ ಆಯ್ತು!
ನಾವು ಅಂದುಕೊಂಡಿದ್ದೇ ಒಂದು. ಸುರ್ಜೇವಾಲಾ ಅವರು ಕೇಳಿದ್ದೇ ಒಂದು. ಅವರ ಮೊದಲ ಪ್ರಶ್ನೆ ಕೇಳಿ ಮೀಟರ್ ಆಫ್ ಆಯಿತು.- ಕೊತ್ತೂರು ಜಿ. ಮಂಜುನಾಥ್, ಕೋಲಾರ ಶಾಸಕ.