ಬಿಜೆಪಿ-ಜೆಡಿಎಸ್‌ ಪಟ್ಟಿ ಬಳಿಕವೇ ಕಾಂಗ್ರೆಸ್‌ 4 ಅಭ್ಯರ್ಥಿ ಘೋಷಣೆ?

| Published : Mar 23 2024, 01:46 AM IST / Updated: Mar 23 2024, 12:26 PM IST

Congress
ಬಿಜೆಪಿ-ಜೆಡಿಎಸ್‌ ಪಟ್ಟಿ ಬಳಿಕವೇ ಕಾಂಗ್ರೆಸ್‌ 4 ಅಭ್ಯರ್ಥಿ ಘೋಷಣೆ?
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಕಾಂಗ್ರೆಸ್‌ನಿಂದ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲು ಶನಿವಾರ ನಡೆಯಲಿರುವ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಕಾಂಗ್ರೆಸ್‌ನಿಂದ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲು ಶನಿವಾರ ನಡೆಯಲಿರುವ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿಯಿದೆ.

ಈ ಬಗ್ಗೆ ಶುಕ್ರವಾರ ಸಂಜೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅನೌಪಚಾರಿಕ ಸಭೆ ನಡೆಸಿದ್ದು, ಸಭೆಯಲ್ಲಿ ಈ ಚರ್ಚೆ ಬಂದಿರುವುದಾಗಿ ಹೇಳಲಾಗಿದೆ.

ಕಾಂಗ್ರೆಸ್‌ ಚುನಾವಣಾ ಸಮಿತಿಯು ಶನಿವಾರ ನಾಲ್ಕೂ ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೂಲಗಳ ಪ್ರಕಾರ ಬಿಜೆಪಿ ಹಾಗೂ ಜೆಡಿಎಸ್‌ ಪಟ್ಟಿ ಅಂತಿಮಗೊಳ್ಳುವವರೆಗೆ ಕಾಂಗ್ರೆಸ್‌ ಅಂತಿಮ ಪಟ್ಟಿ ಬಿಡುಗಡೆ ಮಾಡದಿರಲು ತೀರ್ಮಾನಿಸುವ ಸಂಭವವಿದೆ ಎಂದು ತಿಳಿದುಬಂದಿದೆ.

ಟಿಕೆಟ್‌ ಹಂಚಿಕೆ ಬಾಕಿಯಿರುವ ಬಳ್ಳಾರಿ ಕ್ಷೇತ್ರಕ್ಕೆ ಹಿರಿಯ ಶಾಸಕ ಇ.ತುಕಾರಾಂ ಹೆಸರು ಬಹುತೇಕ ಅಂತಿಮಗೊಂಡಿದೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ರಕ್ಷಾ ರಾಮಯ್ಯ ಹೆಸರು ಮುಂಚೂಣಿಯಲ್ಲಿದ್ದರೂ ಮತ್ತೋರ್ವ ಆಕಾಂಕ್ಷಿ, ಮಾಜಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಅವರು ಪಟ್ಟು ಸಡಿಲಿಸುತ್ತಿಲ್ಲ. 

ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ಮುಂದುವರೆಸಿರುವುದರಿಂದ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎನ್ನಲಾಗಿದೆ.ಇನ್ನು ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಾ ರಾಮಯ್ಯ ಹಾಗೂ ಶಿವಶಂಕರರೆಡ್ಡಿ ಇಬ್ಬರನ್ನೂ ಕರೆಸಿ ಮನವೊಲಿಸಲು ಯತ್ನಿಸಿದ್ದಾರೆ. 

ಈ ವೇಳೆ ಪಕ್ಷ ತೊರೆಯುವ ಹೇಳಿಕೆ ನೀಡಿದ್ದ ಶಿವಶಂಕರರೆಡ್ಡಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿದುಬಂದಿದೆ.ಉಳಿದಂತೆ ಚಾಮರಾಜನಗರ ಕ್ಷೇತ್ರದಿಂದ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಹೆಸರು ಬಹುತೇಕ ಅಂತಿಮಗೊಂಡಿದೆ.

ಇನ್ನು ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರೆದಿದೆ. ಕೆ.ಎಚ್.ಮುನಿಯಪ್ಪ ಅವರು ಚಿಕ್ಕಪೆದ್ದಣ್ಣ ಪರ ಪ್ರಬಲ ಲಾಬಿ ನಡೆಸುತ್ತಿದ್ದು, ಕೆ.ಎಚ್.ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡದಂತೆ ಮತ್ತೊಂದು ಬಣ ಪಟ್ಟು ಹಿಡಿದಿದೆ. 

ಹೀಗಾಗಿ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಅವರ ಪರ ಒಲವು ಹೆಚ್ಚಾಗಿದೆ. ಆದರೆ ಕೆ.ಎಚ್‌.ಮುನಿಯಪ್ಪ ಅವರು ಪ್ರಯತ್ನವನ್ನು ತೀವ್ರಗೊಳಿಸಿರುವುದರಿಂದ ತಿಕ್ಕಾಟ ಮುಂದುವರೆದಿದೆ.

ದಿನವಿಡೀ ಸರಣಿ ಸಭೆ: ಇದಕ್ಕೂ ಮೊದಲು ಕೆ.ಎಚ್.ಮುನಿಯಪ್ಪ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಟಿಕೆಟ್‌ಗಾಗಿ ಚರ್ಚೆ ನಡೆಸಿದರು. 

ಬಳಿಕ ಡಾ.ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪುತ್ರನ ಪರ ಲಾಬಿ ಮಾಡಿದರು. ಮತ್ತೊಂದೆಡೆ ಶಿವಶಂಕರರೆಡ್ಡಿ ಹಾಗೂ ರಕ್ಷಾ ರಾಮಯ್ಯ ಅವರೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಸಿದರು.