ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲಾಗಲಿಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

| Published : Aug 06 2024, 12:34 AM IST / Updated: Aug 06 2024, 05:43 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ.  

 ಮದ್ದೂರು :  ಹತ್ತು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆಯುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಸರ್ಕಾರವನ್ನು ಒಡೆದು ಹಾಕಲು ಅದೇನು ಮಡಕೆಯೇ? ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿಲಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್ ಎಲ್ಲಾ ಸೇರಿ ಗ್ಯಾರಂಟಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದು ಕುಟುಕಿದರು.

2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇವಲ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು ಅಧಿಕಾರಕ್ಕೆ ಬಂದಿಲ್ಲ. ಪಕ್ಷಕ್ಕೆ ಮತ ಹಾಕಿದ 1.70 ಕೋಟಿ ಮತ ಹಾಕಿರುವ ಜನರು ಅಧಿಕಾರಕ್ಕೆ ಬಂದಿದ್ದಾರೆ. ಬಡವರ, ಮಹಿಳೆಯರ, ರೈತರ ರಕ್ಷಣೆಗೆ ಈ ಸರ್ಕಾರವನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ಇರುತ್ತದೆಯೋ ಅಷ್ಟು ವರ್ಷವೂ ನಮ್ಮ ತಾಯಂದಿರ ಖಾತೆಗೆ ಗೃಹಲಕ್ಷ್ಮೀ ಹಣ ಬರುತ್ತದೆ ಎಂದು ಖಚಿತವಾಗಿ ಹೇಳಿದರು.

ನನ್ನ ಅಜ್ಜಯ್ಯನ ಸುದ್ದಿಗೆ ಬರಬೇಡ. ಅಜ್ಜಯ್ಯನ ಶಕ್ತಿ ಏನು ಎಂಬುದು ನಿನಗೇನು ಗೊತ್ತು? ಅವರ ಶಕ್ತಿ ನನಗೆ ಮಾತ್ರ ಗೊತ್ತು. ಏತಕ್ಕೆ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದೆ? ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ಬಿಜೆಪಿ-ಜೆಡಿಎಸ್‌ನವರು ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲೇ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದು ನಿಮಗೆ ಸಹಿಸಲು ಆಗುತ್ತಿಲ್ಲ. ಬಡವರಿಗೆ ಕೆಲಸ ಮಾಡುವ ಅವಕಾಶ ಬಿಜೆಪಿ, ಜೆಡಿಎಸ್ ಅವರಿಗೆ ಸಿಗದ ಕಾರಣಕ್ಕೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ ಎಂದರು.