ರಾಜ್ಯ ವರ್ಸಸ್‌ ಕೇಂದ್ರ ಸಂಘರ್ಷ ತಾರಕಕ್ಕೆ । ಬರ ಪರಿಹಾರಕ್ಕೆ ಕಾಂಗ್ರೆಸ್‌ ಧರಣಿ

| Published : Apr 24 2024, 02:22 AM IST / Updated: Apr 24 2024, 02:23 AM IST

ರಾಜ್ಯ ವರ್ಸಸ್‌ ಕೇಂದ್ರ ಸಂಘರ್ಷ ತಾರಕಕ್ಕೆ । ಬರ ಪರಿಹಾರಕ್ಕೆ ಕಾಂಗ್ರೆಸ್‌ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದ್ದು, ‘ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಂಗಳವಾರ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದ್ದು, ‘ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಂಗಳವಾರ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದರು.

ಧರಣಿಯಲ್ಲಿ ಪಾಲ್ಗೊಂಡು ಸುದ್ದಿಗಾರರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾವು ಮನವಿ ಸಲ್ಲಿಸಿ 7 ತಿಂಗಳಾದರೂ ರಾಜ್ಯಕ್ಕೆ ಬರ ಪರಿಹಾರ ನೀಡದ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಯಾವ ಮುಖ ಇಟ್ಟುಕೊಂಡು ಪದೇ ಪದೇ ಬರುತ್ತಿದ್ದಾರೆ. ರಾಜ್ಯಕ್ಕೆ ಬಂದು ಮತ ಕೇಳಲು ಅವರಿಗೆ ಯಾವ ನೈತಿಕತೆ ಇದೆ?’ ಎಂದು ಪ್ರಶ್ನಿಸಿದರು.

‘ನಾವು ಬರ ಪರಿಹಾರಕ್ಕೆ ಮನವಿ ಸಲ್ಲಿಸಿ 7 ತಿಂಗಳಾಗಿದೆ. 18,172 ಕೋಟಿ ರು.ಗಳನ್ನು ಎನ್.ಡಿ.ಆರ್.ಎಫ್ ನಿಂದ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದ್ದೇವೆ. ಸ್ವತಃ ನಾನು, ಕೃಷ್ಣ ಬೈರೇಗೌಡ ಮೋದಿ ಮತ್ತು ಅಮಿತ್‌ ಶಾ ಅವರನ್ನು ಭೇಟಿ ಮಾಡಿದಾಗ ಪರಿಹಾರ ಬಿಡುಗಡೆಯ ಭರವಸೆ ನೀಡಿದ್ದರು. ಇದುವರೆಗೆ 1 ಪೈಸೆ ಕೂಡ ಪರಿಹಾರ ಕೊಟ್ಟಿಲ್ಲ. ಮೋದಿ, ಅಮಿತ್‌ ಶಾ ಕರ್ನಾಟಕವನ್ನು, ರೈತರನ್ನು ದ್ವೇಷಿಸುತ್ತಾರೆ. ಹಾಗಾಗಿ ಪರಿಹಾರ ಕೊಟ್ಟಿಲ್ಲ. ಇದರಿಂದ ಅನಿವಾರ್ಯವಾಗಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯಿತು’ ಎಂದರು.

ಈ ಮಧ್ಯೆ, ಚನ್ನಪಟ್ಟಣಕ್ಕೆ ಬಂದಾಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬರ ಪರಿಹಾರಕ್ಕೆ ಮನವಿಯನ್ನು ತಡವಾಗಿ ಸಲ್ಲಿಸಿದರು ಎಂದು ಸುಳ್ಳು ಹೇಳಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕರ್ನಾಟಕಕ್ಕೆ ಯಾವುದೇ ಪರಿಹಾರ ಬಾಕಿ ಇಲ್ಲ. ಗ್ಯಾರಂಟಿಗಳಿಗೆ ಖಜಾನೆ ಖಾಲಿ ಮಾಡಿಕೊಂಡು ಹಣ ಕೇಳುತ್ತಿದ್ದಾರೆ. ಬರಗಾಲಕ್ಕಲ್ಲ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು. ಇನ್ನು ಮೋದಿ ಅವರೂ ಕೊಟ್ಟ ಭರವಸೆಯಂತೆ ನಡೆಯಲಿಲ್ಲ ಎಂದು ಆರೋಪಿಸಿದರು.

ಆದರೆ, ಸುಪ್ರೀಂ ಕೋರ್ಟ್‌ ಮುಂದೆ ಮಾತ್ರ ಇವರು ಹೇಳಿದ ಯಾವ ಸುಳ್ಳುಗಳನ್ನೂ ಪ್ರಸ್ತಾಪ ಮಾಡಿಲ್ಲ. ಇಂತಹವರು ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಪದೇ ಪದೇ ಬಂದು ಮತ ಕೇಳುತ್ತಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? ಹಾಗಾಗಿಯೇ ನಾವು ಗೋ ಬ್ಯಾಕ್‌ ಮೋದಿ, ಗೋಬ್ಯಾಕ್‌ ಅಮಿತ್‌ ಶಾ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿದ್ದೇವೆ. ರಾಜ್ಯದ ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇತರ ಯೋಜನೆಗೂ ಕೇಂದ್ರ ಕಡೆಗಣನೆ:

ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ನೀಡುವುದಾಗಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ನಲ್ಲಿಯೇ ಘೋಷಿಸಿದ್ದರು. ಇದುವರೆಗೆ ಆ ಹಣ ಬರಲಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರು. ವಿಶೇಷ ಅನುದಾನವನ್ನೂ ರಾಜ್ಯಕ್ಕೆ ಕೊಡಲಿಲ್ಲ. ಪೆರಿ ಫೆರಲ್‌ ರಿಂಗ್‌ ರೋಡ್‌ಗೆ 3,000 ಕೋಟಿ ರು. ಹಾಗು ಬೆಂಗಳೂರಿನ ಅಭಿವೃದ್ಧಿಗೆ 3,000ಕೋಟಿ ರು. ಕೊಡಿ ಎಂದು ಆಯೋಗ ಶಿಫಾರಸು ಮಾಡಿದ್ದರೂ ಕೊಡಲಿಲ್ಲ ಎಂದು ದೂರಿದರು.

ಅಮಿತ್ ಶಾ ಅವರು ಮೊದಲು ಸಭೆ ನಡೆಸಿ 18171 ಕೋಟಿ ರು. ಕೊಟ್ಟು ಆಮೇಲೆ ರಾಜ್ಯಕ್ಕೆ ಬರಲಿ. ಅಲ್ಲಿಯವರೆಗೆ ನಿಮಗೆ ಯಾವುದೇ ಮತ ಕೇಳುವ ಹಕ್ಕು ಇಲ್ಲ ಎಂದು ಅವರಿಗೆ ಹೇಳುತ್ತೇವೆ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ ಎಂದರು.

ಬರಗಾಲವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ:

ಗ್ಯಾರಂಟಿಗಳಿಗೆ ನಮ್ಮ ಸಂಪನ್ಮೂಲದಿಂದಲೇ ಭರಿಸಿದ್ದೇವೆ. 36,000 ಕೋಟಿ ರು.ಗಳನ್ನು ಕಳೆದ ವರ್ಷ ಹಾಗೂ 52,009 ಕೋಟಿ ರು.ಗಳನ್ನು ಮುಂದಿನ ಸಾಲಿಗೆ ಮೀಸಲಿರಿಸಿದ್ದೇವೆ. ಕೇಂದ್ರದಿಂದ 1 ಪೈಸೆಯೂ ನಮಗೆ ಬೇಡ. ಬರಗಾಲಕ್ಕೆ 48,000 ಹೆಕ್ಟೇರ್ ಪ್ರದೇಶ ಮಳೆ ಇಲ್ಲದೇ ಬೆಳೆ ನಷ್ಟವಾಗಿದೆ. ನಮ್ಮ ಸರ್ಕಾರ ತಲಾ 2000 ರು. ವರೆಗೆ 34 ಲಕ್ಷ ರೈತರಿಗೆ 650 ಕೋಟಿ ರು.ಗಳಷ್ಟು ತಾತ್ಕಾಲಿಕ ಪರಿಹಾರ ನೀಡಿದೆ. ಬರಗಾಲವನ್ನು ಈವರೆಗೆ ಸಮರ್ಥವಾಗಿ ಎದುರಿಸಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಸಚಿವರಾದ ಕೃಷ್ಣ ಭೈರೇಗೌಡ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್ ಮತ್ತಿತರ ನಾಯಕರು ಉಪಸ್ಥಿತರಿದ್ದರು. ನ್ಯಾಯಕ್ಕಾಗಿ ಜನತಾ ನ್ಯಾಯಾಲಯದ ಮೊರೆ: ಸುರ್ಜೇವಾಲಾರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಮಾತನಾಡಿ, ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ನಾವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಮೊದಲ ಹಂತದ ಜಯ ಸಿಕ್ಕಿದೆ. ಈಗ ಈ ಧರಣಿಯ ಮೂಲಕ ನ್ಯಾಯಕ್ಕಾಗಿ ಜನತಾ ನ್ಯಾಯಾಲಯದ ಮುಂದೆಯೂ ಹೋಗುತ್ತಿದ್ದೇವೆ. ರಾಜ್ಯದ ಪರವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಭಾರತೀಯ ಚೊಂಬು ಪಕ್ಷದ ಸುಳ್ಳುಗಳನ್ನು ಜನತೆಗೆ ತೋರಿಸುತ್ತೇವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಿಂದಲೇ ಬಿಜೆಪಿ ಕಿತ್ತು ಹಾಕುವ ಪ್ರಯತ್ನ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಮಗಾಗಿರುವ ಅನ್ಯಾಯಕ್ಕೆ ತಕ್ಕ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.