ನವೆಂಬರ್ ಕ್ರಾಂತಿ ಆಗಲಿಲ್ಲ. ಸಂಕ್ರಾಂತಿ ಕ್ರಾಂತಿಗೂ ಇಲ್ಲ, ಯುಗಾದಿಗೂ ಇಲ್ಲ. ೨೦೨೮ಕ್ಕೆ ನಾವೇ ಅಧಿಕಾರಕ್ಕೆ ಬಂದು ಕ್ರಾಂತಿ ಮಾಡುತ್ತೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ರಾಹುಲ್ ಗಾಂಧಿ, ಖರ್ಗೆ ಅವರು ಕುಳಿತು ತೀರ್ಮಾನ ಮಾಡುತ್ತಾರೆ. ಯಾರ ಬಳಿಯೂ ಅನಿಸಿಕೆಗಳನ್ನು ಕೇಳುವುದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೮ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಎಬ್ಬಿಸುತ್ತದೆ. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ ಕ್ರಾಂತಿ ಆಗಲಿಲ್ಲ. ಸಂಕ್ರಾಂತಿ ಕ್ರಾಂತಿಗೂ ಇಲ್ಲ, ಯುಗಾದಿಗೂ ಇಲ್ಲ. ೨೦೨೮ಕ್ಕೆ ನಾವೇ ಅಧಿಕಾರಕ್ಕೆ ಬಂದು ಕ್ರಾಂತಿ ಮಾಡುತ್ತೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ರಾಹುಲ್ ಗಾಂಧಿ, ಖರ್ಗೆ ಅವರು ಕುಳಿತು ತೀರ್ಮಾನ ಮಾಡುತ್ತಾರೆ. ಯಾರ ಬಳಿಯೂ ಅನಿಸಿಕೆಗಳನ್ನು ಕೇಳುವುದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ ಎಂದರು.
ನಾವು ಯಾವ ಸಮುದಾಯದವರ ವಿರೋಧಿಗಳಲ್ಲ. ಕಾನೂನು ಎಲ್ಲರಿಗೂ ಒಂದೇ. ಒಕ್ಕೂಟದ ವ್ಯವಸ್ಥೆಯಲ್ಲಿ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರಾಜ್ಯದವರು ವಾಸಿಸುತ್ತಿರುತ್ತಾರೆ. ನಾವು ಕೇರಳಕ್ಕೆ ಹೋಗಿ ಮನಸ್ಸಿಗೆ ಬಂದಾಗೆ ಮಾಡೋಕೆ ಆಗುತ್ತಾ. ಕಾನೂನಿನ ವ್ಯವಸ್ಥೆಯಲ್ಲಿಯೇ ನಾವೂ ಇರಬೇಕು. ಕಾನೂನು ಉಲ್ಲಂಘಿಸಿದಾಗ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮುಸ್ಲಿಮರ ಮನೆಗಳ ಒತ್ತುವರಿ ತೆರವು ಸಂಬಂಧ ಕೇರಳ ಸಿಎಂ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಕಾಂಗ್ರೆಸ್ ಎಲ್ಲ ಸಮುದಾಯದ ಹಿತವನ್ನು ಬಯಸುತ್ತದೆ. ಅನ್ಯಾಯ, ತೊಂದರೆ ಮಾಡುವುದು ನಮ್ಮ ಪಕ್ಷದ ಜಾಯಮಾನದಲ್ಲಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕೇರಳ ಸಿಎಂ ಆ ಮಾತು ಹೇಳಿರಬಹುದು. ನಮ್ಮ ಪಕ್ಷ ಒಂದು ಸಮುದಾಯವನ್ನ ಇಟ್ಟುಕೊಂಡು ಹೋಗಿಲ್ಲ. ಕಾನೂನಿಡಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಉತ್ತರ ಪ್ರದೇಶದಲ್ಲಿ ರಾತ್ರಿ ಕಂಡಿದ್ದು ಬೆಳಗ್ಗೆ ಇರುವುದಿಲ್ಲ.
ಬೆಳಗ್ಗೆ ಕಂಡಿದ್ದು ರಾತ್ರಿ ಇರುವುದಿಲ್ಲ. ಕೇರಳ ಸಿಎಂಗೆ ಅದರ ಬಗ್ಗೆ ಮಾತನಾಡಲಿ ಎಂದು ಚಾಟಿ ಬೀಸಿದರು.ಡ್ರಗ್ಸ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇಡೀ ಪ್ರಪಂಚದಲ್ಲೆ ಡ್ರಗ್ ಮಾಫಿಯಾ ಇದೆ. ಮಾಫಿಯಾದವರು ದೊಡ್ಡ ದೊಡ್ಡ ನಾಯಕರ ಜೊತೆಯಲ್ಲಿಯೇ ಓಡಾಡುತ್ತಿರುತ್ತಾರೆ. ಅವರನ್ನು ಹಿಡಿಯೋಕೆ ಕಾನೂನು ವ್ಯಾಪ್ತಿಯೊಳಗೆ ಬರುತ್ತಿಲ್ಲ. ಕಾನೂನು ಭದ್ರತೆಯಲ್ಲಿಯೇ ಯಾರೂ ಕಂಡುಹಿಡಿಯದಂತೆ ಡ್ರಗ್ ಮಾಫಿಯಾ ನಡೆಸುತ್ತಿದ್ದಾರೆ. ಎರಡು ವರ್ಷದಲ್ಲಿ ೫೦ ಕಡೆ ನಮ್ಮ ಪೊಲೀಸರು ದಾಳಿ ಮಾಡಿದ್ದಾರೆ. ಮಹಾರಾಷ್ಟ್ರದವರು ಬೆಂಗಳೂರಿನಲ್ಲಿ ಎರಡು ಕಡೆ ದಾಳಿ ಮಾಡಿದ್ರೆ ತಪ್ಪೇನು. ನಾವು ಯಾವುದನ್ನೂ ಲಘುವಾಗಿ ಪರಿಗಣಿಸುವುದಿಲ್ಲ. ಸರ್ಕಾರ ನಮ್ಮ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಡ್ರಗ್ ಮಾಫಿಯಾ ವಿರುದ್ಧ ನಮ್ಮ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.