ಕ್ಷೇತ್ರಾಂತರದ ಪರಿಣಾಮ: ಇದೇ ಮೊದಲ ಬಾರಿಗೆ ಮರಿತಿಬ್ಬೇಗೌಡ ವರ್ಸಸ್ ಶ್ರೀಕಂಠೇಗೌಡ..!

| Published : May 14 2024, 01:03 AM IST / Updated: May 14 2024, 04:34 AM IST

ಕ್ಷೇತ್ರಾಂತರದ ಪರಿಣಾಮ: ಇದೇ ಮೊದಲ ಬಾರಿಗೆ ಮರಿತಿಬ್ಬೇಗೌಡ ವರ್ಸಸ್ ಶ್ರೀಕಂಠೇಗೌಡ..!
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ ಮತ್ತು ಕೆ.ಟಿ. ಶ್ರೀಕಂಠೇಗೌಡ ಮುಖಾಮುಖಿಯಾಗಲಿದ್ದಾರೆ.

ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ ಮತ್ತು ಕೆ.ಟಿ. ಶ್ರೀಕಂಠೇಗೌಡ ಮುಖಾಮುಖಿಯಾಗಲಿದ್ದಾರೆ.

ನಾಲ್ಕು ಬಾರಿ ಗೆದ್ದಿದ್ದ ಮರಿತಿಬ್ಬೇಗೌಡರು ಶಿಕ್ಷಕರ, ಎರಡು ಬಾರಿ ಗೆದ್ದಿದ್ದ ಶ್ರೀಕಂಠೇಗೌಡರು ಪದವೀಧರ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿದ್ದರು. ಆದರೆ ಈ ಬಾರಿ ಶ್ರೀಕಂಠೇಗೌಡರು ಕ್ಷೇತ್ರಾಂತರ ಮಾಡಿ, ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವುದರಿಂದ ಹಲವು ವರ್ಷಗಳ ಕಾಲ ಒಂದೇ ಪಕ್ಷದಲ್ಲಿದ್ದ, ಒಂದೇ ಜಿಲ್ಲೆಯವರಾದ ಈ ಇಬ್ಬರು ಮೊದಲ ಬಾರಿ ಎದುರಾಳಿಗಳಾಗುತ್ತಿದ್ದಾರೆ.

ಮರಿತಿಬ್ಬೇಗೌಡರು 2000, 2006, 2012, 2018- ಹೀಗೆ ಸತತ ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಬಾರಿ ಐದನೇ ಚುನಾವಣೆ ಎದುರಿಸುತ್ತಿದ್ದಾರೆ. ಮೊದಲ ಬಾರಿ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಅವರು ಜೆಡಿಎಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು.ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸುವ ಸಲುವಾಗಿಯೇ ಅವರು ಮಾ.21 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2000 ರಲ್ಲಿ ಈ ಕ್ಷೇತ್ರದ ಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾಗಿತ್ತು. ಏಕೆಂದರೆ ಸುಶಿಕ್ಷಿತರ ಕ್ಷೇತ್ರದಲ್ಲಿ ಜನತಾ ಪರಿವಾರ ಹಾಗೂ ಬಿಜೆಪಿಯದ್ದೇ ಆಟ. ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬುದು ಇದಕ್ಕೆ ಕಾರಣ. ಆದರೆ ಇದನ್ನು ಸುಳ್ಳು ಮಾಡುವಂತೆ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದವರು ಮರಿತಿಬ್ಬೇಗೌಡರು. ಈ ಭಾಗದ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೊದಲ ಗೆಲವು ತಂದುಕೊಟ್ಟ ಹೆಗ್ಗಳಿಕೆಯೂ ಅವರದೇ.

ನಂತರ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ ಅವರಿಗೆ 2006 ರಲ್ಲಿ ಟಿಕೆಟ್ ಸಿಗಲಿಲ್ಲ. ಬದಲಿಗೆ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ ಪಿ. ಶಾರದಮ್ಮ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಮರಿತಿಬ್ಬೇಗೌಡರು ಎದೆಗುಂದದೆ ಶಿಕ್ಷಕರ ವೇದಿಕೆಯ ಹೆಸರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್- ಹೀಗೆ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ, ಎರಡನೇ ಬಾರಿ ಆಯ್ಕೆಯಾದರು.

ಮತ್ತೆ ಜೆಡಿಎಸ್ನಲ್ಲಿ ಗುರುತಿಸಿಕೊಂಡ ಅವರು 2012 ರಲ್ಲಿ ಮೂರನೇ ಬಾರಿ ಗೆದ್ದು, ಹ್ಯಾಟ್ರಿಕ್ ವೀರ ಎನಿಸಿಕೊಂಡರು.

ಉಪ ಸಭಾಪತಿಯೂ ಆದರು. 2018 ರಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾದರು.

ದಕ್ಷಿಣ ಪದವೀಧರ ಕ್ಷೇತ್ರದಿಂದ 2022 ರಲ್ಲಿ ತಮ್ಮ ಆಪ್ತ ಜಯರಾಂ ಕೀಲಾರ ಅವರಿಗೆ ಟಿಕೆಟ್ ಬಯಸಿದ್ದರು. ಆದರೆ ವರಿಷ್ಠರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ, ಪಕ್ಷದಿಂದ ದೂರ ಸರಿದರು. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರ ಪರ ಕೆಲಸ ಮಾಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ತಮ್ಮ ಅವಧಿ ಮುಗಿದು, ಚುನಾವಣೆ ಸಮೀಪಿಸಿದ್ದರಿಂದಾಗಿ ಅವರು ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಬಾರದು ಎಂಬ ಕಾರಣದಿಂದ ಮುಂಚಿತವಾಗಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು.

ಕಳೆದ ಎರಡು ಚುನಾವಣೆಗಳಲ್ಲೂ ಮರಿತಿಬ್ಬೇಗೌಡರ ಎದುರಾಳಿಯಾಗಿದ್ದ ಎಂ. ಲಕ್ಷ್ಮಣ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿಯಿಂದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜಮೂರ್ತಿ ಅಭ್ಯರ್ಥಿಯಾಗಿದ್ದರು. ಅದಕ್ಕೂ ಮೊದಲು ಸತತ ಮೂರು ಚುನಾವಣೆಗಳಲ್ಲಿ ಪ್ರೊ.ಎಸ್.ಎಂ. ಗುರುನಂಜಯ್ಯ ಅಭ್ಯರ್ಥಿಯಾಗಿ ಸೋತಿದ್ದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಲವಾರು ಬಾರಿ ಗೆದ್ದಿದೆ. ಆದರೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಐದು ಬಾರಿ ಪಕ್ಷೇತರರು, ಮೂರು ಬಾರಿ ಜನತಾ ಪರಿವಾರ, ಒಮ್ಮೆ ಕಾಂಗ್ರೆಸ್ ಗೆದ್ದಿದೆ.

1992 ರಲ್ಲಿ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಯ ಬಿ.ಆರ್. ಕೃಷ್ಣಮೂರ್ತಿ ಅವರ ನಿಧನದಿಂದಾಗಿ 1997ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿ ಜನತಾದಳದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದ ಶ್ರೀಕಂಠೇಗೌಡರು ಬಿಜೆಪಿಯ ಗೋ. ಮಧುಸೂದನ್ ಎದುರು ಸೋತರು. 1998ರ ಚುನಾವಣೆಯಲ್ಲಿ ಎ. ಸುಬ್ಬಣ್ಣ ಅವರಿಗೆ ಜನತಾದಳ ಟಿಕೆಟ್ ನೀಡಲಾಗಿತ್ತು. ಆದರೆ ಶ್ರೀಕಂಠೇಗೌಡ ಬಂಡಾಯದ ಬಾವುಟ ಹಾರಿಸಿದ್ದರು. ಆಗಲೂ ಗೋ. ಮಧುಸೂದನ್ ಗೆದ್ದರು.

2004 ರಲ್ಲಿ ಶ್ರೀಕಂಠೇಗೌಡರು ಬಿಜೆಪಿಯ ಗೋ. ಮಧುಸೂದನ್ ಅವರನ್ನು ಮಣಿಸಿ, ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. 2010 ರಲ್ಲಿ ಬಿಜೆಪಿಯ ಗೋ. ಮಧುಸೂದನ್ ಎದುರು ಸೋತರು. 2016ರ ಚುನಾವಣೆಯಲ್ಲಿ ಗೋ. ಮಧುಸೂದನ್ ಅವರ ಬದಲು ಮೈ.ವಿ. ರವಿಶಂಕರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರ ಲಾಭ ಪಡೆದ ಶ್ರೀಕಂಠೇಗೌಡ ಎರಡನೇ ಬಾರಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು.

2022ರ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ. ಬದಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಚ್.ಕೆ. ರಾಮು ಅವರಿಗೆ ಟಿಕೆಟ್ ಕೊಡಿಸಿದ್ದರು. ಅವರು ಸೋತು, ಕಾಂಗ್ರೆಸ್ನ ಮಧು ಜಿ. ಮಾದೇಗೌಡ ಗೆದ್ದರು.

ರಾಜ್ಯದಲ್ಲಿ ಬದಲಾದ ರಾಜಕೀಯ ಚಿತ್ರಣದಿಂದಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಇರುವುದರಿಂದ ತಾವು ಗೆಲ್ಲಬಹುದು ಎಂದು ಶ್ರೀಕಂಠೇಗೌಡರು ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.

ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಆರು ಕ್ಷೇತ್ರಗಳಿಂದ ಚುನಾವಣೆ ನಡೆಯುತ್ತಿದೆ. ಬಿಜೆಪಿಯು ಐದು ಪ್ಲಸ್ ಒಂದು ಸೂತ್ರದಂತೆ ತನ್ನ ಐದು ಅಭ್ಯರ್ಥಿಗಳ ಯಾದಿ ಪ್ರಕಟಿಸಿತ್ತು. ಆದರೆ ನಾಲ್ಕು ಪ್ಲಸ್ ಎರಡು ಸೂತ್ರಕ್ಕೆ ಒತ್ತಾಯಿಸುತ್ತಿದ್ದ ಜೆಡಿಎಸ್ ತನ್ನ ಭದ್ರನೆಲೆಯಾದ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಟಿಸಿರುವುದು ಸರಿಯಲ್ಲ. ತನಗೆ ಬಿಟ್ಚುಕೊಡಬೇಕು ಎಂದು ವಾದಿಸಿತು. ಅಂತಿಮವಾಗಿ ಬಿಜೆಪಿ ವರಿಷ್ಠರು ಇದಕ್ಕೆ ಮಣೆ ಹಾಕಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಮೇ 16 ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್‌ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ: ಸಾ.ರಾ. ಮಹೇಶ್

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಕೂಡ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.ನಮ್ಮಲ್ಲಿ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ವಿವೇಕಾನಂದ, ಕೆ.ಟಿ. ಶ್ರೀಕಂಠೇಗೌಡ ಇಬ್ಬರೂ ಆಕಾಂಕ್ಷಿಗಳು. ಯಾರು ಅಭ್ಯರ್ಥಿ ಎಂದು ಫೈನಲ್ ಮಾಡಿ ನಾಮಿನೇಷನ್ ಹಾಕ್ತೇವೆ ಎಂದು ಅವರು ಹೇಳಿದರು.