ಸಾರಾಂಶ
ಮೈಸೂರು: ರಾಜ್ಯ ಸರ್ಕಾರದಿಂದ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಕುರಿತು ಜ.26 ರಿಂದ ಫೆ.26 ರವರೆಗೆ ರಾಜ್ಯಾದ್ಯಂತ ಜಾಗೃತಿ ಜಾಥಾ ಆಯೋಜಿಸಲಾಗಿದ್ದು, ಫೆ.24 ಮತ್ತು 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಜಾಥಾಕ್ಕೆ ಜ.26 ರಂದು ಧ್ವಜಾರೋಹಣದ ಬಳಿಕ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ.
ಜಾಥಾ ಹೋಗುವ ಮಾರ್ಗದ ಕುರಿತು ಇದಕ್ಕಾಗಿಯೇ ರಚಿಸಲಾದ ವೆಬ್ ಸೈಟ್ ಮೂಲಕ ಮಾಹಿತಿ ಪಡೆಯಬಹುದು. ಜಾಥಾ ಸಾಗುವ ವೇಳೆ ಸ್ಥಳೀಯ ಶಾಸಕರು, ಸಂಸದರು ಪಾಲ್ಗೊಂಡು ಸರ್ಕಾರದ ಗ್ಯಾರಂಟಿ, ಇತರ ಸೌಲಭ್ಯ ದೊರಕದ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಿದ್ದಾರೆ ಎಂದರು.
ಒಂದು ತಿಂಗಳವರೆಗೆ ರಾಜ್ಯಾದ್ಯಂತ ಜಾಥಾ ನಡೆಸಲಾಗುವುದು. ಒಂದು ವಾಹನದ ಮೇಲೆ ಸ್ತಬ್ಧಚಿತ್ರದೊಂದಿಗೆ ಎಲ್.ಇ.ಡಿ ಪರದೆ ಜೋಡಿಸುವ ಮೂಲಕ ಸಂವಿಧಾನದ ಮಹತ್ವ ಏನು?. ಅದು ರೂಪುಗೊಂಡು ಜಾರಿಯಾದ ಬಗೆ ಹೇಗೆ ಎಂಬ ವಿವರವನ್ನು ಜನರಿಗೆ ತೋರಿಸಲಾಗುತ್ತದೆ ಎಂದರು.
ಫೆ.24 ಮತ್ತು 25 ರಂದು ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣ, ಸಂವಾದ ನಡೆಯಲಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್, ಕರ್ನಾಟಕ ಕಾನೂನು ವಿವಿ ಸಹಯೋಗದಲ್ಲಿ ವಿಚಾರ ಸಂಕಿರಣ ಜರುಗಲಿದೆ ಎಂದರು.
ಸಮಾವೇಶದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಅರ್ಥಪೂರ್ಣ ಚರ್ಚೆಗಳ 10 ಸಂಪುಟಗಳ ಪುಸ್ತಕ ಬಿಡುಗಡೆ ಆಗಲಿದೆ. ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಭಾಷಣವನ್ನೂ ಪುಸ್ತಕ ಒಳಗೊಂಡಿದೆ.
ಡಾ. ಬಾಬು ರಾಜೇಂದ್ರ ಪ್ರಸಾದ್, ರಾಜಾಜಿ ಅಂತಹವರೂ ಸೇರಿದಂತೆ ಸಂವಿಧಾನ ರಚನಾ ಸಭೆಯ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿರಲಿವೆ ಎಂದರು.