ಸಾರಾಂಶ
ಚಿಕ್ಕಬಳ್ಳಾಪುರ : ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಎರಡನೆ ವರ್ಷದ ಬಂಪರ್ ಕೊಡುಗೆಯಾಗಿ ಅರಿಶಿಣ, ಕುಂಕುಮ ಸೀರೆ, ಬಳೆಗಳ ವಿತರಣೆಗೆ ಭಾನುವಾರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ಅರಿಷಿಣ ಕುಂಕುಮ ಬಳೆಗಳನ್ನು ಕಳೆದ ಒಂದು ವರ್ಷದಿಂದ ಕ್ಷೇತ್ರದ ಜನತೆಯ ಸೋದರ ಹಾಗೂ ಮಗನಾಗಿ ನೀಡಿದ್ದೇನೆ. ಇಂದು ಸಹಾ ಎರಡನೇ ವರ್ಷದ ಪ್ರಯುಕ್ತ ನೀಡುತ್ತಿದ್ದೇನೆ. ನಮ್ಮ ಕಡೆಯವರು ಸಹಾ ಕ್ಷೇತ್ರದ ಎಲ್ಲಡೆ ವಿತರಿಸುತ್ತಿದ್ದಾರೆ ಎಂದರು.
ತಾಯಿ ಅನುಭವಿಸಿದ ನೋವು
ನಾವು ಬಡತನದಲ್ಲಿದ್ದಾಗ ನಮ್ಮ ತಾಯಿ ಮಂಜುಳರವರು ಸಾಕಷ್ಟು ಹಬ್ಬಗಳಿಗೆ ಹೊಸ ಸೀರೆ ಹಾಕಿಕೊಂಡಿರಲಿಲ್ಲ. ಬಡವರ ಆ ನೋವು ಏನೆಂದು ಬಡತನ ಅನುಭವಿಸಿರುವ ನನಗೆ ಗೊತ್ತಿದೆ. ಬಡವರು ಅದರಲ್ಲೂ ಮುಖ್ಯವಾಗಿ ತಾಯಂದಿರು ಯಾರು ಹಬ್ಬದ ದಿನ ಹೊಸ ಬಟ್ಟೆ ಇಲ್ಲ ಎಂದು ನೋವುಪಡಬಾರದೆಂದು ನನ್ನ ತಾಯಂದಿರಿಗೆ ಸೀರೆ ವಿತರಣೆ ಮಾಡುತ್ತಿದ್ದೇನೆ.
ಅನಾಥನಾಗಿರುವ ನಾನು ಅವರಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ ಎಂದು ತಿಳಿಸಿದರು. ನನ್ನ ಸ್ವಂತ ಹಣದಿಂದ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ 6500 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಿದ್ದು, ಅಂಗನವಾಡಿಯಿಂದ ಹಿಡಿದು 1ರಿಂದ 10 ನೇ ತರಗತಿಯವರೆಗೆ ಸರ್ಕಾರಿ ಶಾಲೆಯ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದು ಜೊತೆ ಬಟ್ಟೆಗಳನ್ನು ನೀಡಿದ್ದೇನೆ ಎಂದರು.