ಸಾರಾಂಶ
ಕೋಲಾರ : ರಾಜ್ಯ ಕಾಂಗ್ರೆಸ್ ಸರ್ಕಾರವು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಖಂಡಿಸಿ ಕೋಲಾರದಲ್ಲಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೆಂಪೇಗೌಡ ಜಯಂತಿಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆಹ್ವಾನಿಸಿಲ್ಲ ಎಂಬ ವಿಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಕೆಂಪೇಗೌಡ ಸ್ತಬ್ಧ ಚಿತ್ರ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು.
ಪೊಲೀಸರರ ಮಧ್ಯ ಪ್ರವೇಶ
ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನಪರಿಷತ್ ಎಂ.ಎಲ್.ಅನಿಲ್‌ಕುಮಾರ್ ಮುಂದೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪರಸ್ಪರ ಹೊಡೆದಾಟಕ್ಕೂ ಮುಂದಾಗಿದ್ದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.ಇದೇ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಜನಪ್ಪನಹಳ್ಳಿ ನವೀನ್ ಕುಮಾರ್ ಜೆಡಿಎಸ್ ಕಾರ್ಯಕರ್ತರನ್ನು ಹೊಡೆಯಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಜನಪ್ಪನಹಳ್ಳಿ ನವೀನ್ ಕುಮಾರ್ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ತಡೆದು ಹೊರಗೆ ಕಳುಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಸಮುದಾಯದವರು ಸಣ್ಣಪುಟ್ಟ ಗೊಂದಲಗಳಿಗೆ ಜಗಳ ಮಾಡಿಕೊಳ್ಳಬಾರದು, ಸಮುದಾಯದ ಏಳಿಗೆಗಾಗಿ ಗಣ್ಯರು ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಕಿವಿಮಾತು ಹೇಳಿದರು.ಡಿಜೆ ಹಾಕದಂತೆ ಅಡ್ಡಿವೇಮಗಲ್, ಅರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳಿಗೆ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕೋಲಾರಕ್ಕೆ ಬರುತ್ತಿದ್ದಾಗ, ಮುಸ್ಲಿಂ ಮುಖಂಡರು ದಾರಿಯೂದ್ದಕ್ಕೂ ತೆರಳಬೇಕಾದರೆ ಡಿಜೆ ಆನ್ ಮಾಡಿಕೊಂಡು ಹೋಗಿ, ಜತೆಗೆ ದೇವರ ಹಾಡುಗಳನ್ನು ಹಾಕಬಾರದು ಎಂದು ತಾಕೀತು ಮಾಡಿದರು,
ಆ ವೇಳೆ ಒಕ್ಕಲಿಗರ ಸಮುದಾಯದ ಮುಖಂಡರು ಹಾಗೂ ಮುಸ್ಲಿಂ ಮುಖಂಡರ ನಡುವೆ ವಾಗ್ವಾದ ನಡೆಯಿತು.ಹನುಮಾನ್ ಸೇರಿದಂತೆ ಭಕ್ತಿ ಗೀತೆಗಳನ್ನು ಈ ರಸ್ತೆಯಲ್ಲಿ ಹಾಕಬೇಡಿ ಎಂದು ಮುಸ್ಲಿಂ ಮುಖಂಡರು ಹೇಳಿದಕ್ಕೆ ಕೆರಳಿದ ಒಕ್ಕಲಿಗ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆತಡೆ ಮಾಡಲು ಮುಂದಾದರು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಗಲ್‌ಪೇಟೆ ಪೊಲೀಸರು ಎರಡು ಕಡೆಯ ಮುಖಂಡರನ್ನು ಸಮಾಧಾನಪಡಿಸಿದರು.