ಸಾರಾಂಶ
ಬೆಂಗಳೂರು : ‘ಮುಂದಿನ ಜನ್ಮದಲ್ಲಿ ನನಗೆ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ’ ಎಂಬ ಕಾಂಗ್ರೆಸ್ ಶಾಸಕ ಸಂಗಮೇಶ್ವರ್ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಸಂಗಮೇಶ್ ಅವರೇ, ಮುಂದಿನ ಜನ್ಮಕ್ಕೆ ಕಾಯಬೇಡಿ. ಈಗಲೇ ಹೋಗಿ ಬಿಡಿ. ನಿಮ್ಮ ಕ್ಷೇತ್ರದ ಉಳಿದ ಮತದಾರರಿಗೆ ಯಾಕೆ ಅವಮಾನ ಮಾಡುತ್ತೀರಿ. ನಿಮ್ಮದೇ ಸಮುದಾಯಕ್ಕೆ ಏಕೆ ಅವಮಾನ ಮಾಡುತ್ತೀರಿ’ ಎಂದು ಟಾಂಗ್ ನೀಡಿದ್ದಾರೆ.
ಮತ್ತೊಂದೆಡೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ‘ಕರ್ನಾಟಕ ರಾಜ್ಯ ಅವಮಾನಪಡುವಂತಹ ಹೇಳಿಕೆಯನ್ನು ಸಂಗಮೇಶ್ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಇದೆ ಎನ್ನುವುದು ಪ್ರೂವ್ ಆಗಿದೆ. ಕಾಂಗ್ರೆಸ್ನ ಎಲ್ಲಾ ಶಾಸಕರು ಮುಸ್ಲಿಮರಾಗಬೇಕು ಎಂದು ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರಾ?. ಇದೊಂದು ಮತಾಂತರ ಮಾಡುವ ಕೆಲಸ ಅನ್ನಿಸುತ್ತೆ. ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ, ಈ ರೀತಿ ಹೇಳಿಕೆ ಕೊಡ್ತಾ ಇದ್ದಾರೆ. ಸಂಗಮೇಶ್ ಅವರ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ. ಹಿಂದೂ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆ ಇದಾಗಿದೆ’ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ, ಶಿವಮೊಗ್ಗದಲ್ಲಿ ಮಾತನಾಡಿದ ಸಂಸದ ಬಿ.ವೈ,ರಾಘವೇಂದ್ರ, ಈ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆಯ ಅಸಲಿ ಮುಖವನ್ನು ಶಾಸಕರ ಹೇಳಿಕೆ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇಂತಹ ಹೇಳಿಕೆ ನೀಡಿದ ಶಾಸಕರಿಗೆ ಭಾರತದಂತಹ ಪುಣ್ಯಭೂಮಿಯಲ್ಲಿ ಪುನರ್ ಜನ್ಮವೇ ಇರಲು ಸಾಧ್ಯವಿಲ್ಲ ಎಂದಿದ್ದಾರೆ.