ಸಾರಾಂಶ
ಭದ್ರಾವತಿ : ‘ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ನಿಮ್ಮ ಈ ಪ್ರೀತಿ ನೋಡುತ್ತಿದ್ದರೆ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಆಸೆ ಉಂಟಾಗುತ್ತಿದೆ’ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆಯನ್ನೂ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಮೇಶ್ವರ್, ’ಮುಸ್ಲಿಂ ಜನಾಂಗದ ಪ್ರೀತಿಗೆ ಪಾತ್ರನಾಗಿರುವ ನನಗೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ. 20 ವರ್ಷಗಳ ಹಿಂದೆ ಈದ್ ಮಿಲಾದ್ ಮೆರವಣಿಗೆ ರದ್ದಾಗಿತ್ತು. ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಮತ್ತೆ ಪ್ರಾರಂಭಿಸಿತು. ಅಂದಿನಿಂದ ಶಾಂತಿಯುತವಾಗಿ ಮೆರವಣಿಗೆ ನಡೆಯುತ್ತಿದೆ. ನಿಮ್ಮೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.