ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಮಂತ್ರಿ ಭಾಗ್ಯ ಸಿಗದಿದ್ದರೂ ನಿಗಮ ಮಂಡಳಿಯಲ್ಲಾದರೂ ಎರಡು ಸ್ಥಾನ ಜಿಲ್ಲೆಗೆ ದಕ್ಕಿರುವುದು ಕಾಂಗ್ರೆಸ್ ಕಾರ‍್ಯಕರ್ತರಲ್ಲಿ ಸಂತಸ, ಉತ್ಸಾಹ ಮೂಡಿಸಿದೆ.
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜಿಲ್ಲೆಯನ್ನು ರಾಜಕೀಯವಾಗಿ ಸಂಪೂರ್ಣವಾಗಿ ಕಡೆಗಣಿಸುತ್ತಲೆ ಬರುತ್ತಿದೆ ಎಂಬುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಇಂಬು ನೀಡಿದೆ.
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ೪ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಒಬ್ಬರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗುವ ಭಾಗ್ಯ ಸಿಕ್ಕಿಲ್ಲ.
3ಬಾರಿ ಗೆದ್ದರೂ ಸಚಿವರಾಗಲಿಲ್ಲ: ಎರಡು ಬಾರಿ ಶಾಸಕರಾದವರು ಮೂವರಿದ್ದರೆ ಮೂರು ಬಾರಿ ಶಾಸಕರಾದವರು ಒಬ್ಬರು ಚುನಾಯಿತರಾಗಿದ್ದಾರೆ. ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಆದರೆ ಇವರಲ್ಲಿ ಒಬ್ಬರಿಗೆ ಮಂತ್ರಿ ಭಾಗ್ಯದ ಅವಕಾಶ ನೀಡದರೆ ಹೊರಗಿನವರನ್ನು ಉಸ್ತುವಾರಿ ಮಂತ್ರಿಯಾಗಿ ಮಾಡಿರುವುದು ಜಿಲ್ಲೆಯ ಅಭಿವೃದ್ಧಿ ಹಿನ್ನಡೆಗೆ ಹಿಡಿದ ಕನ್ನಡಿಯಾಗಿದೆ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗುವರೆಂದು ಕಾರ‍್ಯಕರ್ತರು ಅತ್ಯಂತ ವಿಶ್ವಾಸದಿಂದಿದ್ದರು. ಆದರೆ ಕೊನೆಗಳಿಗೆಯಲ್ಲಿ ಜಿಲ್ಲೆಯ ಯಾವ ಶಾಸಕರಿಗೆ ಮಂತ್ತಿಗಿರಿ ದಕ್ಕಿಲ್ಲ.
ಇದರಿಂದ ಸರ್ಕಾರದ ನಡೆ ವಿರುದ್ದ ನಿಷ್ಟಾವಂತ ಕಾರ‍್ಯಕರ್ತರ ಮುನಿಸಿಗೆ ಕಾರಣವಾಗಿತ್ತು. ಈ ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಶ್ರೀನಿವಾಸಪುರ ಕ್ಷೇತ್ರದ ಕೆ.ಆರ್.ರಮೇಶ್ ಕುಮಾರ್ ಮಾತ್ರ ಸಚಿವರಾಗಿದ್ದರು.
ಈಡೇರದ ಕಾರ್ಯಕರ್ತರ ಆಸೆ: ಈ ಬಾರಿ ಚುನಾವಣೆಯಲ್ಲಿ ರಮೇಶ್ ಕುಮಾರ್ ಸೋತಿದ್ದರಿಂದ ಆಯ್ಕೆಯಾದವರ ಪೈಕಿ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತ್ರ ಹಿರಿಯ ಸದಸ್ಯರಾಗಿರುವುದರಿಂದ ಅವರಿಗೆ ಸಚಿವರಾಗುವ ಎಲ್ಲ ಅರ್ಹತೆಗಳಿವೆ ಎಂದು ಕಾರ‍್ಯಕರ್ತರು ಕೋಲಾರಮ್ಮ ದೇವಾಲಯದಲ್ಲಿ ತಮ್ಮ ಶಾಸಕರಿಗೆ ಮಂತ್ರಿಗಿರಿ ದೊರೆಯಲಿ ಎಂದು ಉರುಳು ಸೇವೆ ಮಾಡಿ ಹೈಕಮಾಂಡ್ ಗಮನ ಸೆಳೆದಿದ್ದರು.
ಆದರೆ ಜಿಲ್ಲೆಯ ಯಾವ ಶಾಸಕರಿಗೆ ಅವಕಾಶ ಸಿಕಿಲ್ಲ,ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬೈರತಿ ಸುರೇಶ್ ಆಗೊಮ್ಮೆ ಈಗೊಮ್ಮೆ ಕಾರ‍್ಯಕ್ರಮಗಳಿಗೆ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವುದನ್ನು ಬಿಟ್ಟರೆ ಯಾರ ಕೈಗೂ ಸಿಗ್ಗ ಎಂಬ ಆರೋಪವಿದೆ.
ಈಗ ನಿಗಮ ಮಂಡಳಿ ನೇಮಕದಲ್ಲಿ ಜಿಲ್ಲೆಯ ಇಬ್ಬರು ಶಾಸಕರಿಗೆ ಅವಕಾಶ ನೀಡಿರುವುದಕ್ಕೆ ಕಾರ‍್ಯಕರ್ತರು ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಇಬ್ಬರು ಶಾಸಕರಿಗೆ ಅವಕಾಶ: ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್‌ಗೆ ಮೊದಲ ಪಟ್ಟಿಯಲ್ಲೆ ಅವಕಾಶ ನೀಡಿರುವುದರಿಂದ ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಹಾಗೂ ಪಕ್ಷ ಸಂಘಟನೆಗೆ ಆನೆ ಬಲ ಬಂದಿದೆ ಎಂದು ಮುಖಂಡರು ಹಾಗೂ ಕಾರ‍್ಯಕರ್ತರು ಹರ್ಷವ್ಯಕ್ತಪಡಿಸಿದ್ದಾರೆ.
ಅಲ್ಲದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಹಿಂದೆ ಅಂಬೇಡ್ಕರ್ ಅಭಿವೃದ್ದಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರಿಂದ ಅವರಿಗೆ ಯಾವುದೇ ಹುದ್ದೆ ನೀಡಿದರೂ ಅದನ್ನು ನಿರ್ಹಿಸಬಲ್ಲರು ಎಂಬುದು ಅವರ ಬೆಂಬಲಿಗರ ಅನಿಸಿಕೆ.
ಮಂತ್ರಿಗಿರಿ ಸಿಗದಿದ್ದರೂ ನಿಗಮ ಮಂಡಳಿ ಹುದ್ದೆಯಾದರೂ ದೊರೆಯಿತಲ್ಲ ಎಂದು ಸಂತಸಗೊಂಡಿರುವ ಕಾಂಗ್ರೆಸ್ ಕಾರ‍್ಯಕರ್ತರು ಹಾಗೂ ಶಾಸಕರ ಬೆಂಬಲಿಗರು ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾದ ಮೇಲೆ ಅದ್ಧೂರಿಯಾಗಿ ಸಂಭ್ರಮಿಸಲು ಸಜ್ಜಾಗಿದ್ದಾರೆ.