ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕೇಂದ್ರದ ಬಿಜೆಪಿ ಸರ್ಕಾರ ಜನ ವಿರೋಧಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಹೊಂದಿದ್ದು, ದೇಶದಲ್ಲಿ ಬಿಜೆಪಿಯನ್ನು ತೊಲಗಿಸಿ ದೇಶವನ್ನು ಉಳಿಸುವಂತೆ ಜನಜಾಗೃತಿ ಮೂಡಿಸಲು ನಗರದ ನಿಲ್ದಾಣದಲ್ಲಿ ಶುಕ್ರವಾರ ಸಿಪಿಎಂ ಜಿಲ್ಲಾ ಸಮಿತಿಯಿಂದ ಪ್ರಚಾರಾಂದೋಲನ ಹಾಗೂ ಪ್ರತಿಭಟನಾ ಸಭೆ ನಡೆಸಲಾಯಿತು.ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಭಾರತದ ಸಂವಿಧಾನದಂತೆ ದೇಶಾದ್ಯಂತ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ, ಆದರೆ ಒಕ್ಕೂಟ ಸರಕಾರ ರಾಜ್ಯ ಸರಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ಕಾರ್ಮಿಕರ ರಕ್ಷಿಸಲು ಮುಂದಾಗಲಿಕಾರ್ಮಿಕ ಕಾನೂನು ಬಂಡವಾಳಶಾಹಿ ಪರಬೇಡ, ಅಸಂಘಟಿತ ಕಾರ್ಮಿಕರ ರಕ್ಷಣೆ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಬಲಗೊಳಿಸಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕು, ಬಡ-ಮಧ್ಯಮ ರೈತರ ಸಾಲವನ್ನು ಮನ್ನಾ ಮಾಡಿ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು, ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ಮಾಡಲಾದ ತಿದ್ದುಪಡಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಪಿ.ಆರ್.ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರಕಾರದ ಆಡಳಿತದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಆದರೆ, ಕೇಂದ್ರ ಸರ್ಕಾರ ಇನ್ನು ನಿರ್ಲಕ್ಷಿಸಿ ಕೇವಲ ಜನರನ್ನು ಮೋಡಿ ಮಾಡುವ ಮಾತಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.ಕಾರ್ಮಿಕರ ಹಿತ ಕಾಪಾಡುತ್ತಿಲ್ಲ
ಮೋದಿ ಸರ್ಕಾರ ಕೇವಲ ಘೋಷಣೆ, ಪ್ರಚಾರ, ಕಾರ್ಪೊರೇಟ್ ನೀತಿಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ವೇಗವಾಗಿ ಸಾಗುತ್ತಿದೆ. ರೈತರು, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಿಂದೆ ಬಿದ್ದಿದೆ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ, ಇದರಿಂದ ಜನರ ಗಮನ ಸೆಳೆಯಲು ಕೋಮು ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಆರ್.ಸೂರ್ಯನಾರಾಯಣ, ಟಿ.ಎಂ.ವೆಂಕಟೇಶ್, ಎ.ಆರ್.ಬಾಬು, ಸದಸ್ಯರಾದ ಪಾತಕೋಟ ನವೀನ್ ಕುಮಾರ್, ಪಿ.ತಂಗರಾಜ್, ಅಶೋಕ್, ವಿಜಯಕೃಷ್ಣ ಇದ್ದರು.