ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಆ.2 ರಂದು ದಲಿತ ಸಚಿವರು ಹಾಗೂ ಕಾಂಗ್ರೆಸ್‌ನ ದಲಿತ ಶಾಸಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಆ.2 ರಂದು ದಲಿತ ಸಚಿವರು ಹಾಗೂ ಕಾಂಗ್ರೆಸ್‌ನ ದಲಿತ ಶಾಸಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಭೋಜನಕೂಟದ ಹೆಸರಿನಲ್ಲಿ ಆ.2 ರಂದು ಗೃಹ ಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ಸಭೆ ಕರೆಯಲಾಗಿದ್ದು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿ ಮುಂದಿನ ತೀರ್ಮಾನಗಳ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ಮೂಲಗಳು ತಿಳಿಸಿವೆ.
ಈ ಹಿಂದೆ ದಲಿತ ಸಚಿವರು, ಶಾಸಕರ ಸಭೆ ಕರೆದಿದ್ದಾಗ ಸುರ್ಜೇವಾಲಾ ಅವರ ಸೂಚನೆ ಮೇರೆಗೆ ಸಭೆಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಒಳ ಮೀಸಲಾತಿ ಕುರಿತು ಚರ್ಚಿಸುವ ಹೆಸರಿನಲ್ಲಿ ದಲಿತ ಎಡ ಹಾಗೂ ಬಲ ಎರಡೂ ಸಮುದಾಯದ ಶಾಸಕರು ಹಾಗೂ ಸಚಿವರಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿ ಯಾವುದೇ ಕ್ಷಣದಲ್ಲಾದರೂ ಸರ್ಕಾರಕ್ಕೆ ಸಲ್ಲಿಕೆಯಾಗಬಹುದು. ಒಂದು ವೇಳೆ ವರದಿ ಸಲ್ಲಿಕೆಯಾದ ಬಳಿಕ ಶೀಘ್ರ ಒಳ ಮೀಸಲಾತಿ ಜಾರಿ ಮಾಡಲು ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿದುಬಂದಿದೆ.
