ಸಾರಾಂಶ
ಚಿಕ್ಕಬಳ್ಳಾಪುರ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ನಿಲ್ಲಿಸಬೇಕು. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಜಿಲ್ಲಾ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದವು.
ಈ ವೇಳೆ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾಲ್ಫಿನ್ ನಾಗರಾಜ್ ಮಾತನಾಡಿ, ಇತ್ತಿಚೇಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ. 40 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯರವರ ವರ್ಚಸ್ಸಿಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಗಿಸಲು ಸಂಚು
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದರ ಹಿಂದೆ ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿಯ ಬಿ.ಎಲ್. ಸಂತೋಷ್ ಮತ್ತಿತರರ ಕೈವಾಡವಿದೆ. ಈ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ಹೇಳಿದರುಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ತಮ್ಮ ಮೇಲಿನ ಆರೋಪಕ್ಕೆ ತನಿಖಾ ಆಯೋಗ ರಚಿಸಿರುವ ದೇಶದ ಏಕೈಕ ನಾಯಕ ಸಿದ್ದರಾಮಯ್ಯ ಎಂಬುದು ಇವರಿಗೆ ಅರ್ಥವಾಗಬೇಕು ಎಂದರು.
ಅಪರ ಡೀಸಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯ ನಂತರ ಜಿಲ್ಲಾಢಳಿತ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿವಿಆರ್ ರಾಜೇಶ್, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆನಂದ್, ಮುಖಂಡರಾದ ಯಲುವಹಳ್ಳಿ ರಮೇಶ್,ರಾಜಾಕಾಂತ್, ರಾಮಕೃಷ್ಣಪ್ಪ, ರಾಮಚಂದ್ರ, ಲಕ್ಷ್ಮಯ್ಯ, ಮತ್ತಿತರರು ಇದ್ದರು.