ಪಕ್ಷ ಹಣ ಕೊಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕಣದಿಂದ ಹಿಂದಕ್ಕೆ!

| Published : May 05 2024, 02:02 AM IST / Updated: May 05 2024, 04:45 AM IST

ಪಕ್ಷ ಹಣ ಕೊಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕಣದಿಂದ ಹಿಂದಕ್ಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಪ್ರಚಾರಕ್ಕೆ ಪಕ್ಷದ ನಿಧಿಯಿಂದ ಹಣಕಾಸಿನ ನೆರವು ಸಿಗಲಿಲ್ಲ ಎಂದು ಆರೋಪಿಸಿ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ, ತಮ್ಮ ಟಿಕೆಟ್ ಹಿಂದಿರುಗಿಸಿದ್ದು, ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಆಘಾತ ಹಾಗೂ ಮುಜುಗರ ಉಂಟು ಮಾಡಿದೆ.

ಭುವನೇಶ್ವರ: ಚುನಾವಣಾ ಪ್ರಚಾರಕ್ಕೆ ಪಕ್ಷದ ನಿಧಿಯಿಂದ ಹಣಕಾಸಿನ ನೆರವು ಸಿಗಲಿಲ್ಲ ಎಂದು ಆರೋಪಿಸಿ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ, ತಮ್ಮ ಟಿಕೆಟ್ ಹಿಂದಿರುಗಿಸಿದ್ದು, ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಆಘಾತ ಹಾಗೂ ಮುಜುಗರ ಉಂಟು ಮಾಡಿದೆ.

ಇತ್ತೀಚೆಗೆ ದಿಲ್ಲಿಯಲ್ಲಿ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಜಪ್ತಿ ಮಾಡಿದಾಗ ಪಕ್ಷವು, ತನ್ನ ದೈನಂದಿನ ಖರ್ಚಿಗೂ ಹಣವಿಲ್ಲ ಎಂದಿತ್ತು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಆಗಿದ್ದೇನು?:  ಕಾಂಗ್ರೆಸ್‌ನ ಸುಚರಿತಾ ಮೊಹಂತಿ ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಬಿಜೆಡಿ ಅಭ್ಯರ್ಥಿ ಹಾಗೂ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಅರೂಪ್ಪಾ ಪಯಕ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈಗ ಸುಚರಿತಾ ಅವರು ತಾವು ಎಲೆಕ್ಷನ್ ಅಖಾಡದಿಂದ ಹಿಂದಕ್ಕೆ ಸರಿದಿರುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಾರೆ.

‘ಪಕ್ಷ ಪಾರ್ಟಿ ಫಂಡ್ ನಿರಾಕರಿಸಿದ ಕಾರಣ ಪ್ರಚಾರ ಕಷ್ಟವಾಗುತ್ತಿದೆ. ಒಡಿಶಾ ಉಸ್ತುವಾರಿ ಅಜಯ ಕುಮಾರ್ ಅವರು ‘ನಿಮ್ಮ ಸ್ವಂತ ಹಣದಿಂದ ಪ್ರಚಾರ ನಡೆಸಿ’ ಎಂದು ಹೇಳಿದ್ದಾರೆ. ಇದು ನನ್ನಿಂದ ಆಗದು’ ಎಂದು ಸುಚರಿತಾ ಹೇಳಿದ್ದಾರೆ.

‘ರಾಜಕೀಯಕ್ಕೆ ಬರುವ ಮುನ್ನ ಪತ್ರಕರ್ತೆಯಾಗಿದ್ದೆ. ಪುರಿ ಪ್ರಚಾರಕ್ಕೆ ನನ್ನಲ್ಲಿರುವ ಎಲ್ಲವನ್ನು ನೀಡಿದ್ದೇನೆ. ಸಾರ್ವಜನಿಕ ದೇಣಿಗೆ ಕೂಡ ಸಂಗ್ರಹಿಸಿದ್ದೆ. ಮಾತ್ರವಲ್ಲದೇ ಪ್ರಚಾರಕ್ಕೆ ಹಣ ಸಾಲದೇ ಕಾಂಗ್ರೆಸ್ ಹಿರಿಯ ನಾಯಕರ ಬಳಿಯೂ ಕೇಳಿ ಕೊಂಡಿದ್ದೆ. ಪುರಿಯಲ್ಲಿ ಗೆಲ್ಲುವುದಕ್ಕೆ ಪಕ್ಷದ ನಿಧಿ ಅಗತ್ಯ ಎನ್ನುವ ಅರಿವಾಗಿದೆ. ಆದರೆ ಅದು ಸಾಧ್ಯವಾಗದ ಕಾರಣ ಟಿಕೆಟ್ ಹಿಂದಿರುಗಿಸುತ್ತೇನೆ. ಆದರೆ ಕಾಂಗ್ರೆಸ್ ಕಾರ್ಯಕರ್ತೆಯಾಗಿಯೇ ಉಳಿಯುತ್ತೇನೆ’ ಎಂದು ಸುಚರಿತಾ ಹೇಳಿದ್ದಾರೆ.