ರಾಜ್ಯ ಸರ್ಕಾರದಿಂದ ಎಲ್ಲರ ಅಭಿವೃದ್ಧಿ: ಸೌಮ್ಯಾ ರೆಡ್ಡಿ

| Published : Apr 18 2024, 02:16 AM IST / Updated: Apr 18 2024, 05:22 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ - ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 

 ಬೆಂಗಳೂರು:  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ. ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರು ಮುಜರಾಯಿ ಸಚಿವರಾದ ನಂತರ ರಾಜ್ಯದ ಧಾರ್ಮಿಕ ಕ್ಷೇತ್ರದ ಅಮೂಲಾಗ್ರ ಬದಲಾವಣೆಯಾಗಿದ್ದು, ಚುನಾವಣೆಯಲ್ಲಿ ಅದು ನನ್ನ ಕೈ ಹಿಡಿಯಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಸೌಮ್ಯಾರೆಡ್ಡಿ ಮತಯಾಚನೆ ಮಾಡಿದರು. ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಾವು ರೂಪಿಸಿರುವ ಯೋಜನೆಗಳು, ಕಾಂಗ್ರೆಸ್‌ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿದರು.

ಕಾಂಗ್ರೆಸ್‌ ಯಾವಾಗಲೂ ನುಡಿದಂತೆ ನಡೆಯುತ್ತದೆ. ಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಈಡೇರಿಸಿದ್ದೇ ಅದಕ್ಕೆ ಸಾಕ್ಷಿಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ಕೆಳ, ಮಧ್ಯಮ ವರ್ಗದ ಜನರ ಪರವಾಗಿ ತಾನಿದ್ದೇನೆ ಎಂಬುದನ್ನು ಸಾಬೀತುಪಡಿಸಿದೆ. ಮಹಿಳಾ ಸಬಲೀಕರಕ್ಕಾಗಿಯೇ ಶಕ್ತಿ, ಗೃಹ ಲಕ್ಷ್ಮೀ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮಹಿಳಾ ಪರ ಸರ್ಕಾರವಾಗಿ ರೂಪುಗೊಂಡಿದೆ. ಕಾಂಗ್ರೆಸ್‌ ಸರ್ಕಾರದ ಮಾದರಿಯಲ್ಲಿಯೇ ತಾವು ಕೂಡ ಪ್ರತಿಯೊಂದು ಸಂದರ್ಭದಲ್ಲಿ ಕ್ಷೇತ್ರದ ಜನರೊಂದಿಗೆ ಇರುತ್ತೇನೆ. ಜನರ ಕಷ್ಟಗಳಲ್ಲಿ ಜತೆಯಾಗಿರಬೇಕು ಎಂಬ ಕಾರಣಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.

ದೇಶದೆಲ್ಲೆಡೆ ಅದ್ಧೂರಿಯಾಗಿ ಶ್ರೀ ರಾಮನವಮಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆ ಸಚಿವರಾದ ನಂತರ ಸಾಕಷ್ಟು ವಿನೂತನ ಕ್ರಮಗಳನ್ನು ಕೈಗೊಂಡಿದ್ದಾರೆ. ಸಣ್ಣ ದೇವಸ್ಥಾನಗಳಲ್ಲೂ ಅಮೂಲಾಗ್ರ ಬದಲಾವಣೆ ಮಾಡಲು ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಅರ್ಚಕರ ಮತ್ತು ಅವರ ಕುಟುಂಬದವರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂತಹದ್ದೇ ಕೆಲಸಗಳು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಅನುಷ್ಠಾನಗೊಳಿಸಲಾಗುವುದು. ರಾಮಲಿಂಗಾರೆಡ್ಡಿ ಅವರ ಕಾರ್ಯಗಳು ಈ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಲಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರೂ ರಾಮಲಿಂಗಾರೆಡ್ಡಿ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜನರು ತಮ್ಮ ಮೇಲೆ ವಿಶ್ವಾಸ ತೋರುತ್ತಿರುವುದೇ ಅದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಇಡೀ ದಿನ ಕ್ಷೇತ್ರ ಸಂಚಾರ:

ಬುಧವಾರ ಪದ್ಮನಾಭನಗರದಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಕ್ಷೇತ್ರ ವ್ಯಾಪ್ತಿಯ ಕುಮಾರಸ್ವಾಮಿ ಲೇಔಟ್‌, ಬನಶಂಕರಿ, ಗಣೇಶ್‌ ಮಂದಿರ, ಹೊಸಕೆರೆಹಳ್ಳಿ, ಇಟ್ಟಮಡು, ದೇವೇಗೌಡ ಪೆಟ್ರೋಲ್‌ ಬಂಕ್‌, ಸೇರಿದಂತೆ 20ಕ್ಕೂ ಹೆಚ್ಚಿನ ಬಡಾವಣೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ಮತದಾರರೊಂದಿಗೆ ರಾಮನವಮಿ ಆಚರಣೆ:

ಶ್ರೀ ರಾಮನವಮಿ ಹಿನ್ನೆಲೆಯಲ್ಲಿ ಸೌಮ್ಯಾ ರೆಡ್ಡಿ ಮತಯಾಚನೆ ನಡುವೆಯೇ ಜನರೊಂದಿಗೆ ಸೇರಿ ರಾಮನವಮಿ ಆಚರಿಸಿದರು. ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಜನರೊಂದಿಗೆ ಸೇರಿ ಜೈ ಶ್ರೀರಾಮ್‌ ಘೋಷಣೆ ಕೂಗಿದರು. ಅಲ್ಲದೆ, ಜನರಿಗೆ ಪಾನಕ, ಕೋಸಂಬರಿ ಹಂಚಿದರು.