ಸಾರಾಂಶ
ತಮ್ಮ ಚುನಾವಣಾ ಘೋಷಣಾ ಪತ್ರದಲ್ಲಿ 2018ರಲ್ಲಿ 22 ಲಕ್ಷ, 2023ರಲ್ಲಿ 8 ಕೋಟಿ, ಈಗ 60 ಕೋಟಿ ಹೇಳುತ್ತಿದ್ದೀರಾ, ನಮ್ಮ ಅಭಿವೃದ್ಧಿಯಲ್ಲಿ ಕಪ್ಪುಚುಕ್ಕಿ ಇಲ್ಲ ಎನ್ನುತ್ತೀರಲ್ಲ. ರೀಡೂ ಪಿತಾಮಹಾ ಯಾರು?
ಶ್ರೀರಂಗಪಟ್ಟಣ: ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಕಲಿ ಖಾತೆಗೆ ಹಣ ವರ್ಗಾವಾಗಿದೆ. ನಿಮ್ಮ ಆಡತಕ್ಕೆ ಕಳಂಕವಲ್ಲವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಪಾದಯಾತ್ರೆ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದು ದಲಿತ ಸಮುದಾಯದ ವ್ಯಕ್ತಿ ಜಮೀನನ್ನೇ ಅಕ್ರಮವಾಗಿ ಬರೆಸಿಕೊಂಡಿದ್ದೀರಲ್ಲ. ಆದರೂ ಕಳಂಕ ರಹಿತವಾಗಿ ರಾಜಕಾರಣ ಮಾಡಿದ್ದೇನೆ ಎನ್ನುತ್ತಿರಲ್ಲ ಎಂದು ಹರಿಹಾಯ್ದರು.
ತಮ್ಮ ಚುನಾವಣಾ ಘೋಷಣಾ ಪತ್ರದಲ್ಲಿ 2018ರಲ್ಲಿ 22 ಲಕ್ಷ, 2023ರಲ್ಲಿ 8 ಕೋಟಿ, ಈಗ 60 ಕೋಟಿ ಹೇಳುತ್ತಿದ್ದೀರಾ, ನಮ್ಮ ಅಭಿವೃದ್ಧಿಯಲ್ಲಿ ಕಪ್ಪುಚುಕ್ಕಿ ಇಲ್ಲ ಎನ್ನುತ್ತೀರಲ್ಲ. ರೀಡೂ ಪಿತಾಮಹಾ ಯಾರು? ಅರ್ಕಾವತಿ ಹೆಸರಿನಲ್ಲಿ 880 ಎಕರೆ ಡಿನೋಟಿಫಿಕೇಷನ್ ಮಾಡಿ 1 ಎಕರೆಗೆ 1760 ಕೋಟಿಗೂ ಹೆಚ್ಚು ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ಪಾಪಪ್ರಾಯಶ್ಚಿತ್ತಕ್ಕಾಗಿ ಬಿಜೆಪಿ, ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪುಣ್ಯ ಮಾಡಿದ್ದವರು ಎಂದರ್ಥ! ಆದರೆ, ಅವರು ಸ್ವರ್ಗಕ್ಕೆ ಹೋಗಬೇಕಿತ್ತು. ಆದರೆ, ತಿಹಾರ್ ಜೈಲಿಗೆ ಏಕೆ ಹೋಗಿದ್ದರು. ಪುಣ್ಯ ಜ್ಯಾಸ್ತಿಯಾಗಿ ತಿಹಾರ್ ಜೈಲಿಗೆ ಹೋಗಿದ್ದೀರಾ? ಎಂದು ಲೇವಡಿ ಮಾಡಿದರು.
ಈ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಅನ್ನದಾತನಿಗೂ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ: ಶುಭದಾಯಿನಿ
ಮಂಡ್ಯ : ಮೈಸೂರು ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶುಭದಾಯಿನಿ ಹೇಳಿದರು.
ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಅಂತವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗುತ್ತಿದೆ. ಇದು ಅವರ ಜನಪ್ರಿಯತೆ ಸಹಿಸಲಾಗದೆ ವಿಪಕ್ಷಗಳು ಮಾಡುತ್ತಿರುವ ಕುತಂತ್ರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು
ಮುಡಾ ಹಗರಣ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಬ ಮಾಹಿತಿ ಇದೆ. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ವಿನಾಕಾರಣ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ-ಜೆಡಿಎಸ್‌ನವರು ನಡೆಸುತ್ತಿರುವ ಪಾದಯಾತ್ರೆ ಕೇವಲ ಸ್ವಾರ್ಥದ ಯಾತ್ರೆಯಾಗಿದ್ದು, ಇವರಿಗೆ ರಾಜ್ಯದ ಜನರ ಮೇಲಾಗಲಿ, ರಾಜ್ಯದ ಪರವಾಗಿ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಹಾಗೂ ಜನಪರ ಯೋಜನೆಗಳನ್ನು ವಿಪಕ್ಷಗಳಿಂದ ಸಹಿಸಲಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಸರ್ಕಾರ ಪೂರ್ಣಗೊಳಿಸುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಿಂತಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಹನ್ಸಿಯಾಬಾನು, ಎಂ.ಎಸ್.ಜ್ಯೋತಿ, ವೀಣಾ ಶಂಕರ್ ಇದ್ದರು.