ಜೆಡಿಎಸ್-ಬಿಜೆಪಿಗೆ ಸೋಲಿನ ಹತಾಶೆ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Apr 25 2024, 01:00 AM IST / Updated: Apr 25 2024, 04:49 AM IST

ಜೆಡಿಎಸ್-ಬಿಜೆಪಿಗೆ ಸೋಲಿನ ಹತಾಶೆ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

 ಸಮೀಕ್ಷೆಯಿಂದ 15 ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಮೀಕ್ಷಾ ವರದಿ ಹೊರಬಿದ್ದ ನಂತರ ಅವರಿಗೆ ಸೋಲಿನ ಹತಾಶೆ ಕಾಡಲಾರಂಭಿಸಿದೆ. ದಲಿತರು, ಹಿಂದುಳಿದವರು, ಕಾಂಗ್ರೆಸ್ ಪರವಾಗಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಹೋಗಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ.

 ಮಂಡ್ಯ :  ಜೆಡಿಎಸ್-ಬಿಜೆಪಿಯವರಿಗೆ ಸೋಲಿನ ಹತಾಶೆ ಬಹಳವಾಗಿ ಕಾಡುತ್ತಿದೆ. ಅದಕ್ಕಾಗಿ ಜನರೆದುರು ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಭರವಸೆ ನೀಡಿದಂತೆ 5 ಗ್ಯಾರಂಟಿ ಈಡೇರಿಸಿದ್ದೇವೆ. ಇದನ್ನು ಸಹಿಸಿಕೊಳ್ಳದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂದು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ನಮ್ಮ ಸಿಎಂ, ಡಿಸಿಎಂ ಸಹ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದರೂ, ಜೆಡಿಎಸ್-ಬಿಜೆಪಿಯವರು ಇಲ್ಲದ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರಾಜ್ಯದ ೨೮ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮೈತ್ರಿ ಪಕ್ಷಗಳು ಸಮೀಕ್ಷೆಯಿಂದ 15 ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಮೀಕ್ಷಾ ವರದಿ ಹೊರಬಿದ್ದ ನಂತರ ಅವರಿಗೆ ಸೋಲಿನ ಹತಾಶೆ ಕಾಡಲಾರಂಭಿಸಿದೆ. ದಲಿತರು, ಹಿಂದುಳಿದವರು, ಕಾಂಗ್ರೆಸ್ ಪರವಾಗಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಹೋಗಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.

7 ಜನ ಗೆದ್ದರೂ ಅಭಿವೃದ್ಧಿಯಾಗಲಿಲ್ಲ:

2018 ರ ಚುನಾವಣೆಯಲ್ಲಿ ಜಿಲ್ಲೆಯಿಂದ ಏಳಕ್ಕೆ ಏಳೂ ಮಂದಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಅಭಿವೃದ್ಧಿಯಲ್ಲಿ ಮಂಡ್ಯ ಹಿಂದೆ ಇದೆ. ಇಂದಿಗೂ ಅಭಿವೃದ್ಧಿಯಾಗೇ ಇಲ್ಲ. ನಾವು ಮೂರ್ನಾಲ್ಕು ವರ್ಷದಲ್ಲಿ ಹೆಚ್ಚಿನ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಮಾಡಬೇಕೆಂದಿದ್ದೇವೆ. ಈಗಾಗಲೇ ಎಲ್ಲ ಶಾಸಕರೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದರು.

ಕೆ.ಎನ್.ನಾಗೇಗೌಡರಿಂದ ಇಲ್ಲಿಯವರೆಗೆ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಪೂರ್ಣ ಪ್ರಮಾಣದಲ್ಲಿ ಆಗಲೇ ಇಲ್ಲ. ಕೊನೆ ಭಾಗದವರಿಗೆ ಸಮರ್ಪಕವಾಗಿ ನೀರು ಕೊಡಲಾಗುತ್ತಿಲ್ಲ. ಎಲ್ಲವನ್ನೂ ಅಧ್ಯಯನ ಮಾಡಿ ವಿಶ್ವೇಶ್ವರಯ್ಯ ನಾಲಾ ಜಾಲವನ್ನು ಆಧುನೀಕರಣ ಮಾಡುತ್ತಿದ್ದೇವೆ. ಪಾಂಡವಪುರ, ಶ್ರೀರಂಗಪಟ್ಟಣ ಭಾಗದ ರೈತರಿಗೆ ಅರ್ಥ ಆಗಿದೆ. ಮದ್ದೂರು-ಮಳವಳ್ಳಿ ಭಾಗದವರಿಗೂ ಅರ್ಥ ಆಗುತ್ತದೆ. ಕೆಆರ್‌ಎಸ್‌ನಿಂದ ನೀರು ಬಿಟ್ಟ ಎರಡು ದಿನಗಳಲ್ಲಿ ಕೊನೇ ಭಾಗಕ್ಕೆ ತಲುವಂತಹ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಎಲ್ಲ ಕ್ಷೇತ್ರ ಸುತ್ತಾಡಿ ಮಂಡ್ಯಕ್ಕೆ ಬಂದಿದ್ದಾರೆ:ಸಾತನೂರು, ಕನಕಪುರ, ಚನ್ನಪಟ್ಟಣ, ಮಧುಗಿರಿ ಎಲ್ಲ ಕ್ಷೇತ್ರಗಳೂ ಆಯಿತು. ಈಗ ಮಂಡ್ಯಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿ, ಎರಡು ಬಾರಿ ಸಂಸದರಾಗಿದ್ದಾರೆ. ಆ ಸಮಯದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಮುಂದಾಗಲಿಲ್ಲ. ಈಗ ಕಾವೇರಿ, ಮೇಕೆದಾಟು ವಿಚಾರ ಮುಂದಿಟ್ಟು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ದೇವೇಗೌಡರ ಮನೆ ಬಿಟ್ಟು ರಾಜಭವನಕ್ಕೆ ಹೋಗಿದ್ದೆವು:

ಉಪ ಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಅವರಿಂದ ರಾಜೀನಾಮೆ ಕೊಡಿಸಿ ಜಮೀರ್ ಬಸ್ಸಿನಲ್ಲಿ ಎಲ್ಲ ಶಾಸಕರನ್ನೂ ಕರೆದುಕೊಂಡು ದೇವೇಗೌಡರು ನನ್ನ ಮನೆಗೇ ನೇರವಾಗಿ ಬರಬೇಕೆಂದು ಹೇಳಿದ್ದನ್ನೂ ಕೂಡ ಲೆಕ್ಕಿಸದೆ ರಾಜಭವನಕ್ಕೆ ಹೋಗಿದ್ದೆವು. ಅಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದಿದ್ದೆವು. ಸಹಾಯ ಮಾಡಿದವರ ಬಗ್ಗೆ ಸ್ವಲ್ಪವಾದರೂ ಕೃತಜ್ಞತೆ ಇಲ್ಲದಿದ್ದರೆ ಜನರು ಮತ ನೀಡುತ್ತಾರಾ ಎಂದು ಪ್ರಶ್ನಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಾಗ ಮೈತ್ರಿ ಧರ್ಮವನ್ನು ಪಾಲಿಸಲಿಲ್ಲ. ಅದರಿಂದಾಗಿ ನಾವು ಬೇಸರಗೊಂಡು ಮೈತ್ರಿ ವಿರುದ್ಧವಾಗಿ ನಡೆಯಬೇಕಾಯಿತು ಎಂದು ದರ್ಶನ್ ಋಣದ ವಿಚಾರಕ್ಕೆ ಉತ್ತರಿಸಿದರು.

ಸ್ಟಾರ್ ಚಂದ್ರು ಎಲೆಮರೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ತಮ್ಮ ಮಕ್ಕಳಿಗೆ ವ್ಯವಹಾರ ವಹಿಸಿ ರಾಜಕೀಯಕ್ಕೆ ಬಂದಿದ್ದಾರೆ. ಅವರನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ಅಭ್ಯರ್ಥಿ ವೆಂಕಟರಮಣೇಗೌಡ, ಶಾಸಕ ರವಿಕುಮಾರ್, ಮುಖಂಡರಾದ ಎಂ.ಎಸ್. ಚಿದಂಬರ್, ಅಂಜನಾ ಗೋಷ್ಠಿಯಲ್ಲಿದ್ದರು.