ಸಾರಾಂಶ
ನವದೆಹಲಿ: ಅಧಿವೇಶನದಲ್ಲಿ ಆಪರೇಷನ್ ಸಿಂದೂರದ ಕುರಿತು ಚರ್ಚೆಯ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಸರ್ಕಾರದ ನಡುವಿನ ತೀವ್ರ ಜಟಾಪಟಿ ಬಳಿಕ ಕೊನೆಗೂ ಜು.28 ಹಾಗೂ 29ರಂದು ಸಮಯ ನಿಗದಿ ಮಾಡಲಾಗಿದೆ. ಜು.28ರಂದು ಲೋಕಸಭೆಯಲ್ಲಿ ಹಾಗೂ ಜು.29ರಂದು ರಾಜ್ಯಸಭೆಯಲ್ಲಿ ಸಿಂದೂರದ ಬಗ್ಗೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಉಭಯ ಸದನಗಳಿಗೂ 16 ತಾಸು ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ಕಾರದ ಪರ ಮಾತನಾಡುವ ನಿರೀಕ್ಷೆಯಿದೆ. ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕೆಲವು ದೊಡ್ಡ ಆರೋಪಗಳನ್ನು ಸರ್ಕಾರದ ವಿರುದ್ಧ ಮಾಡುವ ಸಾಧ್ಯತೆ ಇದೆ.
ಆಪರೇಷನ್ ಸಿಂದೂರದಲ್ಲಿ ಭಾರತೀಯ ಸೇನೆಗೆ ಆದ ಹಾನಿ, ಭಾರತ ಮತ್ತು ಪಾಕ್ ನಡುವಿನ ಯುದ್ಧ ಸ್ಥಗಿತಗೊಳಿಸಿದ್ದು ತಾನೇ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಕದನ ವಿರಾಮ ಘೋಷಿಸಿದೇ ಇದ್ದರೆ ಭಾರತಕ್ಕೆ ವ್ಯಾಪಾರ ಒಪ್ಪಂದ ಸ್ಥಗಿತದ ಬೆದರಿಕೆ ಹಾಕಿದ್ದ ಟ್ರಂಪ್ ವಿಚಾರವಾಗಿ ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸುವ ಸಾಧ್ಯತೆ ಇದೆ.
ವಿಪಕ್ಷಗಳ ಗದ್ದಲಕ್ಕೆ ಸಂಸತ್
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನದ ಕಲಾಪ ಕೂಡಾ ವಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದೆ. ಅಧಿವೇಶನದ ಮೊದಲ ದಿನ ಪಹಲ್ಗಾಂ ದಾಳಿ, ಆಪರೇಷನ್ ಸಿಂಧೂರ, ಏರಿಂಡಿಯಾ ದುರಂತ ವಿಷಯ ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿದ್ದ ವಿಪಕ್ಷಗಳು ಕಳೆದ ಎರಡು ದಿನಗಳಿಂದ ಬಿಹಾರದಲ್ಲಿ ನಡೆಸಲಾಗುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಬಗ್ಗೆ ತಕ್ಷಣವೇ ಚರ್ಚೆಗೆ ಆಗ್ರಹಿಸಿ ಸದನದೊಳಗೆ ಪ್ರತಿಭಟನೆ ನಡೆಸುತ್ತಿವೆ.
ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಲೇ ವಿಪಕ್ಷಗಳ ಸದಸ್ಯರು, ಭಿತ್ತಿಪತ್ರ ಪ್ರದರ್ಶಿಸಿ, ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗುತ್ತಾ ಬಿಹಾರ ಮತಪಟ್ಟಿ ಪರಿಷ್ಕರಣೆ ಕುರಿತು ಚರ್ಚೆಗೆ ಆಗ್ರಹಿಸಿದರು. ಶೂನ್ಯವೇಳೆಯ ಕಲಾಪಕ್ಕೂ ಸದಸ್ಯರು ಅವಕಾಶ ನೀಡಲಿಲ್ಲ. ಹೀಗಾಗಿ ಸದನವನ್ನು ಕೆಲ ಕಾಲ ಮುಂದೂಡಲಾಯಿತು. ಬಳಿಕ ಮಧ್ಯಾಹ್ನ ಕಲಾಪ ಆರಂಭವಾದಗಲೂ ಗದ್ದಲ ಮುಂದುವರೆದ ಕಾರಣ ಸ್ಪೀಕರ್ ಓಂ ಬಿರ್ಲಾ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.
ಇದೇ ವೇಳೆ ನಿಯಮ ಮೀರಿ ಸದನದೊಳಗೆ ಭಿತ್ತಿಪತ್ರ ಪ್ರದರ್ಶಿಸಿ ಗದ್ದಲ ಎಬ್ಬಿಸಿದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಓಂ ಬಿರ್ಲಾ, ನೀವು ಬೀದಿಯಲ್ಲಿ ಗಲಾಟೆ ಮಾಡುವಂತೆ ಇಲ್ಲಿ ಮಾಡುತ್ತಿದ್ದೀರಿ. ಇದೇ ವರ್ತನೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.ಇನ್ನೊಂದೆಡೆ ರಾಜ್ಯಸಭೆಯಲ್ಲೂ ಬಹುತೇಕ ಇದೇ ರೀತಿಯ ಘಟನಾವಳಿಗಳು ನಡೆದು ಭಾರೀ ಗದ್ದಲದ ಹಿನ್ನೆಲೆಯಲ್ಲಿ ಗುರುವಾರಕ್ಕೆ ಕಲಾಪ ಮುಂದೂಡಲಾಯಿತು.