2028ರ ನಂತರ ಡಿಕೆಶಿ ಸಿಎಂ ಆಗಲಿ, ಅಲ್ಲೀವರೆಗೆ ಸಿದ್ದರಾಮಯ್ಯನವರೇ ಇರಲಿ: ಜಮೀರ್‌

| Published : Nov 13 2025, 12:45 AM IST

ಸಾರಾಂಶ

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. 2028ಕ್ಕೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.

- ಸರ್ಕಾರದ ಉಳಿದ ಅವಧಿಗೂ ಸಿದ್ದು ಅವರೇ ಮುಖ್ಯಮಂತ್ರಿ: ಸಚಿವ ಬೈರತಿ

- ‘ನವೆಂಬರ್‌ ಕ್ರಾಂತಿ’ ಗುಸುಗುಸು ನಡುವೆ ಸಿದ್ದು ಪರ ಸಚಿವದ್ವಯರ ಬ್ಯಾಟಿಂಗ್‌

- ಕುರ್ಚಿ ಕಸರತ್ತು

---

- ಎಐಸಿಸಿ ಅಧ್ಯಕ್ಷರ ಮನೆ ಮುಂದೆ ಹೇಳ್ತಿದ್ದೇನೆ

- ಸಿಎಂ ಕುರ್ಚಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ

- ಶಿವಕುಮಾರ್‌ 2028ಕ್ಕೆ ಸಿಎಂ ಆಗಲಿ: ಜಮೀರ್‌

- 18 ತಿಂಗಳ ಬಳಿಕವೂ ಸಿದ್ದು ಸಿಎಂ: ಸಚಿವ ಬೈರತಿ

---ಕನ್ನಡಪ್ರಭ ವಾರ್ತೆ ಬೆಂಗಳೂರು

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. 2028ಕ್ಕೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಜಮೀರ್‌ ಅಹಮದ್‌ ಖಾನ್‌, ‘ಎಐಸಿಸಿ ಅಧ್ಯಕ್ಷರ ಮನೆ ಮುಂದೆ ನಿಂತು ಹೇಳುತ್ತಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. 2028ಕ್ಕೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಹೇಳಿದರು.

ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಂದಿನ 18 ತಿಂಗಳಲ್ಲಿ ಕುರುಬರ ಸಂಘದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿಯೇ ಆಗಮಿಸಿ ಈ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ತನ್ಮೂಲಕ ಪರೋಕ್ಷವಾಗಿ ಸರ್ಕಾರದ ದ್ವಿತೀಯ ಅರ್ಧದ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಖರ್ಗೆ ಮನೆ ಎದುರೇ ಹೇಳುತ್ತಿದ್ದೇನೆ-ಜಮೀರ್‌:

ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‌ ಅಹಮದ್‌ ಖಾನ್‌, ‘ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಇದನ್ನು ಎಐಸಿಸಿ ಅಧ್ಯಕ್ಷರ ಮನೆ ಮುಂದೆ ನಿಂತು ಹೇಳುತ್ತಿದ್ದೇನೆ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಎಂಬುದು ಇಲ್ಲ. ಆ ಚರ್ಚೆಯೇ ಅಪ್ರಸ್ತುತ’ ಎಂದು ಸ್ಪಷ್ಟವಾಗಿ ಹೇಳಿದರು.

2028ಕ್ಕೆ ಡಿಕೆಶಿ ಸಿಎಂ ಆಗಲಿ:

ಡಿ.ಕೆ.ಶಿವಕುಮಾರ್‌ ಅವರ ಜತೆ ಅಧಿಕಾರ ಹಂಚಿಕೆ ಆಗಲ್ಲವೇ? ಎಂಬ ಪ್ರಶ್ನೆಗೆ, ‘ಅದನ್ನೇ ಹೇಳುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇಲ್ಲ. ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಅವರ ಅಭಿಮಾನಿಗಳಿಗೂ ಇರಬಹುದು, ಎಲ್ಲರಿಗೂ ಇರಬಹುದು. ಅವರು ಪಕ್ಷಕ್ಕಾಗಿ ಕಷ್ಟಪಟ್ಟಿದ್ದಾರೆ. ಆದರೆ 2028ರಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗಲಿ. ಅಲ್ಲಿಯವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಜಮೀರ್‌ ಹೇಳಿದರು.

ರಾಜ್ಯದಲ್ಲಿ ಸರ್ಕಾರ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಪಂಚ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಈಗ 136 ಸ್ಥಾನ ಗೆದ್ದಿದ್ದು 2028ಕ್ಕೆ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿ ಎಂದರು.

--

ಸಿಎಂ-ಡಿಸಿಎಂ ಅಣ್ಣ ತಮ್ಮಂದಿರ

ರೀತಿ ಇದ್ದಾರೆ: ಬೈರತಿ ಸುರೇಶ್

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಣ್ಣ ತಮ್ಮಂದಿರಂತೆ ಇದ್ದಾರೆ. ಮುಂದಿನ 18 ತಿಂಗಳಲ್ಲಿ ಪ್ರದೇಶ ಕುರುಬರ ಸಂಘದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿಯೇ ಆಗಮಿಸಿ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರದ ದ್ವಿತೀಯಾರ್ಧದ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಇಟ್ಟಿರುವ ಪ್ರೀತಿ ಮತ್ತು ನಂಬಿಕೆಯಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಒಂದು ವೇಳೆ ಬೇರೆ ಪಕ್ಷದಲ್ಲಿ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.

ರಾಜ್ಯದಲ್ಲಿ ಮುಂದಿನ ಬೆಳವಣಿಗೆಗಳನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಿದ್ದರಾಮಯ್ಯ-ಡಿ.ಕೆ.ಶಿವಕಮಾರ್ ಅಣ್ಣ ತಮ್ಮದಿರಂತಿದ್ದಾರೆ. ಸಿದ್ದರಾಮಯ್ಯ ಅವರು ನೂರು ರೂಪಾಯಿಯನ್ನೂ ಖರ್ಚು ಮಾಡದೆ 2 ಬಾರಿ ಮುಖ್ಯಮಂತ್ರಿಯಾದವರು. ಆದರೆ, ಸಮಾಜಕ್ಕೆ ಕೆಲಸ ಮಾಡಲು ಯೋಗ್ಯತೆ ಇಲ್ಲದ ಪೇಪರ್ ಟೈಗರ್‌ಗಳು ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿಯಬೇಕು ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.