ಬೆಂಗಳೂರು : ಮೂರು ದಶಕಗಳ ಕನಸು, ಸಂಘಟನೆ, ಪರಿಶ್ರಮ, ಛಲದ ಫಲ ಎಂಬಂತೆ ಬುಧವಾರ ಸಂಜೆ 4.14ರ ಶುಭ ಘಳಿಗೆಯಲ್ಲಿ ಕರುನಾಡಿನ 24ನೇ ಮುಖ್ಯಮಂತ್ರಿ ಆಗಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು 13 ಮಂದಿ ಸಂಪುಟ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕಾರ ಮಾಡಿದರು.

ಇದೇ ವೇಳೆ ರಾಜ್ಯದ 13ನೇ ಹಾಗೂ ವೈಯಕ್ತಿಕ 2ನೇ ಬಾರಿಗೆ ಉಪಮುಖ್ಯಮಂತ್ರಿ ಆಗಿ ಡಾ.ಜಿ.ಪರಮೇಶ್ವರ್‌ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಶಿವಕುಮಾರ್‌ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪೈಕಿ ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್‌ ಖಂಡ್ರೆ, ಬೈರತಿ ಸುರೇಶ್‌, ಶರಣ್‌ ಪ್ರಕಾಶ್ ಪಾಟೀಲ್‌ ಸೇರಿ ಹನ್ನೊಂದು ಮಂದಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರೇ ಪುನಃ ಸಂಪುಟ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದ ಯು.ಟಿ.ಖಾದರ್‌ ಸಂಪುಟ ಸೇರ್ಪಡೆಯಾಗಿದ್ದು, ಪರಿಷತ್‌ ಸದಸ್ಯರಾಗಿದ್ದ ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿಗೆ ಸಚಿವರಾಗಿದ್ದಾರೆ.


ದಲಿತ, ಲಿಂಗಾಯತರ ಮೇಲುಗೈ:

ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ದಲಿತ ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ್‌ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಲಭಿಸಿದೆ. ಉಳಿದಂತೆ ದಲಿತ ಎಡಗೈನ ಕೆ.ಎಚ್.ಮುನಿಯಪ್ಪ, ದಲಿತ ಬಲಗೈನ ಪ್ರಿಯಾಂಕ್ ಖರ್ಗೆ ಸೇರಿ ಮೂರು ಮಂದಿ ದಲಿತರಿಗೆ ಅವಕಾಶ ದೊರೆತಂತಾಗಿದೆ.

ಒಕ್ಕಲಿಗ ಕೃಷ್ಣಬೈರೇಗೌಡ, ರೆಡ್ಡಿ ಒಕ್ಕಲಿಗ ಸಮುದಾಯದಿಂದ ರಾಮಲಿಂಗಾರೆಡ್ಡಿ, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್‌, ಈಶ್ವರ್ ಖಂಡ್ರೆ, ಶರಣ್ ಪ್ರಕಾಶ್ ಪಾಟೀಲ್‌ ಸೇರಿ ಮೂವರಿಗೆ ಅವಕಾಶ ಕಲ್ಪಿಸಲಾಗಿದೆ. ಕುರುಬ ಸಮುದಾಯದಿಂದ ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ, ಎಸ್ಟಿ (ವಾಲ್ಮೀಕಿ) ಸಮುದಾಯದಿಂದ ಸತೀಶ್ ಜಾರಕಿಹೊಳಿ, ಕ್ರಿಶ್ಚಿಯನ್‌ ಸಮುದಾಯದಿಂದ ಕೆ.ಜೆ.ಜಾರ್ಜ್, ಮುಸ್ಲಿಂ ಸಮುದಾಯದಿಂದ ಯು.ಟಿ.ಖಾದರ್‌ ಅವಕಾಶ ಗಿಟ್ಟಿಸಿದ್ದಾರೆ.

ವೇದಿಕೆಯಲ್ಲಿ ಅಜ್ಜಯ್ಯ:

ಸಾಮಾನ್ಯ ಕಾರ್ಯಕರ್ತನಿಂದ ರಾಜಕೀಯ ಪಯಣ ಶುರು ಮಾಡಿ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿದ ಡಿ.ಕೆ.ಶಿವಕುಮಾರ್‌ ಅವರು ಪಂಚೆ ಹಾಗೂ ಜುಬ್ಬಾ ಹಾಗೂ ಕಾಂಗ್ರೆಸ್‌ ಬಾವುಟದ ಬಣ್ಣದ ಶಲ್ಯದ ಸಾಂಪ್ರದಾಯಿಕ ಉಡುಗೆ ತೊಟ್ಟು ಲೋಕಭವನದಲ್ಲಿ ಪೂರ್ವಾಭಿಮುಖವಾಗಿ ವಿಶೇಷವಾಗಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಂಗೊಳಿಸಿದರು. ನೊಣವಿನಕೆರೆಯ ಕಾಡ ಸಿದ್ದೇಶ್ವರ ಮಠದ ವೀರಗಂಗಾಧರ ಅಜ್ಜಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು.

ಬಳಿಕ ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದು ವೀರ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದ ಡಿ.ಕೆ.ಶಿವಕುಮಾರ್‌ ಅವರು, ಇದಕ್ಕೂ ಮೊದಲು ಸಭಿಕರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.

ಸಿಎಂ ಸರಳತೆ:

ರೇಷ್ಮೆ ಪಂಚೆ, ಜುಬ್ಬ, ಶಲ್ಯದಲ್ಲಿ ಮಿಂಚುತ್ತಿದ್ದ ಅವರು, ಗೋಪ್ಯತಾ ಪ್ರಮಾಣವಚನ ಸ್ವೀಕರಿಸುವ ಮೊದಲು ಸಭಿಕರ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ತಿರುಗಾಡಿ ಪ್ರತಿಯೊಬ್ಬರನ್ನೂ ಮಾತನಾಡಿಸಿ ಹಿರಿಯರಿಂದ ಆಶೀರ್ವಾದ, ಕಿರಿಯರಿಂದ ಶುಭಾಶಯ ಸ್ವೀಕರಿಸಿ ಸರಳತೆ ಮೆರೆದರು.

ಮುಗಿಬಿದ್ದ ಅಭಿಮಾನಿಗಳು:

ಡಿ.ಕೆ.ಶಿವಕುಮಾರ್‌ ನೇರವಾಗಿ ಜನರ ಮಧ್ಯೆ ಹೋಗಿದ್ದರಿಂದ ಸಭಾಂಗಣದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗಳಿಗೆ ಹಸ್ತಾಲಾಘವ ಮಾಡಲು ಮುಗಿಬಿದ್ದರು.

ಹರ್ಷೋದ್ಘಾರ:

ಲೋಕಭವನ ಗಾಜಿನ ಮನೆಗೆ 3.30 ಗಂಟೆ ವೇಳೆಗೆ ಡಿ.ಕೆ.ಶಿವಕುಮಾರ್‌ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಡಿ.ಕೆ, ಡಿ.ಕೆ... ಘೋಷಣೆಗಳೊಂದಿಗೆ ಹರ್ಷೋದ್ಘಾರ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ್‌ ಪರ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.

ಶ್ರೀಗಳಿಂದ ಬೈರವ ಮಾಲೆ:ಲೋಕಭವನಕ್ಕೆ ಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಧರ್ಮಗುರುಗಳ, ವಿವಿಧ ಮಠಗಳ ಸ್ವಾಮೀಜಿಗಳು ಆಸೀನರಾಗಿದ್ದ ಕಡೆ ತೆರಳಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಬೈರವ ಮಾಲೆಯನ್ನು ಹಾಕಿ ಅಭಿನಂದಿಸಿದರು. ಈ ವೇಳೆ ಒಂದು ಸುತ್ತು ಓಡಾಡಿ ಬಂದ ಡಿ.ಕೆ.ಶಿವಕುಮಾರ್‌ ಬಳಿಕ ಮಾಲೆ ತೆಗೆದಿಟ್ಟರು.

ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ ಕರಿ ಕಂಬಳಿ ಹೊದಿಸಿ ನಿಮ್ಮ ಹಾದಿ ಸುಗಮವಾಗಿರಲಿ ಎಂದು ಶುಭಕೋರಿದರು. ಇತರೆ ಸ್ವಾಮೀಜಿಗಳು ರುದ್ರಾಕ್ಷಿ ಸರ, ಕ್ರೈಸ್ತ ಧರ್ಮಗುರುಗಳು ಶಿಲುಬೆಯ ದಾರವನ್ನು ಕೊರಳಿಗೆ ಹಾಕಿದರೆ, ಸಂತ ಸೇವಾಲಾಲ್ ಸ್ವಾಮೀಜಿ ಲಂಬಾಣಿ ಕುಸುರಿ ಕಲೆ ಹೊಂದಿರುವ ಶಲ್ಯ ನೀಡಿದರು. ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥರು ಸೇರಿ ಅನೇಕರು ಆಶೀರ್ವಾದ ಮಾಡಿದರು.

ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು:

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ, ಸಂತ ಸೇವಾಲಾಲ್ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿ, ಅರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾಡೋ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಭೋವಿ ಮಠದ ಹಿಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ದ್ವಾರಕನಾಥ ಗುರೂಜಿ, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿನಯ್ ಗುರೂಜಿ ಹಾಗೂ ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ ಡಿಕೆಎಸ್ ಹೆಗಡೆ, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಮತ್ತಿತರ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ರಾಹುಲ್‌, ಗಣ್ಯರ ಸಮ್ಮುಖ ಪ್ರತಿಜ್ಞೆ

ಶಿವಕುಮಾರ್‌ ಅವರು ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ವೇದಿಕೆ ಮೇಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಬು ಬಖ್ರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ತೆಲಂಗಾಣದ ರೇವಂತ್‌ ರೆಡ್ಡಿ, ಹಿಮಾಚಲಪ್ರದೇಶದ ಸುಖ್‌ವಿಂದರ್‌ ಸಿಂಗ್‌ ಸುಖು, ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್‌, ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಭಗೇಲ್‌ ಸಾಕ್ಷಿಯಾದರು.

ಸಂಪುಟ ರಚನೆಯಲ್ಲಿ ಸಿದ್ದು ಮೇಲುಗೈ?

ಸಂಪುಟ ಸಚಿವ ಸ್ಥಾನ ಬದಲಿಗೆ ಸ್ಪೀಕರ್‌ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದ್ದ ಪರಮೇಶ್ವರ್‌ ಅವರು ಉಪಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವಲ್ಲಿ ಸಿದ್ದರಾಮಯ್ಯ ಅವರ ಪ್ರಯತ್ನ ಹೆಚ್ಚಿದೆ ಎಂದು ತಿಳಿದು ಬಂದಿದೆ. 14 ಮಂದಿ ಸಚಿವರು ಹಾಗೂ ಮುಖ್ಯಮಂತ್ರಿ ಸೇರಿ ಮೊದಲ ಹಂತದಲ್ಲಿ 15 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಬೇಕು ಎಂದು ಚರ್ಚೆಯಾಗಿತ್ತು. ಇದಕ್ಕೆ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು. ಮೊದಲ ಹಂತದ ಸಂಪುಟ ಬಲ 10ಕ್ಕೆ ಮೀರಬಾರದು ಎಂದು ಪಟ್ಟು ಹಿಡಿದಿದ್ದರು.

ಆದರೂ ಕೊನೆಯ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಬಣದ ಶರಣ್‌ಪ್ರಕಾಶ್ ಪಾಟೀಲ್‌ ಸೇರ್ಪಡೆಯಾಗಿದ್ದು, ಸಿದ್ದರಾಮಯ್ಯ ಅವರ ಪ್ರಯತ್ನದಿಂದ ಬೈರತಿ ಸುರೇಶ್ ಹಾಗೂ ಈಶ್ವರ್ ಖಂಡ್ರೆ ಮೊದಲ ಪಟ್ಟಿಯಲ್ಲೇ ಸ್ಥಾನ ಪಡೆದರು. ಜತೆಗೆ ಪರಮೇಶ್ವರ್‌ ಅವರಿಗೆ ಪಟ್ಟು ಹಿಡಿದು ಉಪಮುಖ್ಯಮಂತ್ರಿ ಹುದ್ದೆ ಕೊಡಿಸಿದರು. ಆ ಮೂಲಕ ಒಟ್ಟು ಸಂಖ್ಯೆ 14ಕ್ಕೆ ಏರಿಕೆಯಾಯಿತು ಎಂದು ಮೂಲಗಳು ತಿಳಿಸಿವೆ.

ಆ ಮೂಲಕ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ ಸಿದ್ದರಾಮಯ್ಯ ಅವರು ನೂತನ ಸಂಪುಟ ರಚನೆಯಲ್ಲಿ ತಮ್ಮ ಆಪ್ತರಿಗೆ ಅವಕಾಶ ಗಿಟ್ಟಿಸಿಕೊಡುವಲ್ಲಿ ಮೇಲುಗೈ ಸಾಧಿಸಿದ್ದಾರೆ.