ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ತಾಪಂ, ಜಿಪಂ ಸೇರಿ ಕೆಲ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳವರೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ, ‘ಮುಂದಿನ ಒಂದು ತಿಂಗಳಲ್ಲಿ ಕಾಂಗ್ರೆಸ್‌ನ 100 ಕಚೇರಿಗಳ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಲಿದೆ. ಕಾರ್ಯಕ್ರಮದ ಬಳಿಕ ನಾನು ದೊಡ್ಡ ಜವಾಬ್ದಾರಿಯಿಂದ ಮುಕ್ತನಾಗುತ್ತೇನೆ. ಬಳಿಕ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬಹುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲಘು ದಾಟಿಯಲ್ಲಿ ಹೇಳಿದ್ದರು.
ಈ ಹೇಳಿಕೆಗೆ ಗಂಭೀರ ಅರ್ಥ ಕಲ್ಪಿಸಿ ಇನ್ನೇನು ಒಂದು ತಿಂಗಳಲ್ಲಿ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೇ ತ್ಯಜಿಸಲಿದ್ದಾರೆ ಎಂಬ ಅರ್ಥದಲ್ಲಿ ರಾಜಕೀಯ ಚರ್ಚೆಗಳು ಶುರುವಾಗಿವೆ.
ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಇಂಥ ಯಾವುದೇ ಚರ್ಚೆಯಿಲ್ಲ. ಅಕ್ಟೋಬರ್ ತಿಂಗಳವರೆಗೆ ಅಧ್ಯಕ್ಷರ ಬದಲಾವಣೆ ಸಾಧ್ಯತೆಯಿಲ್ಲ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.
ಕೆಲ ಸಚಿವರು ಎರಡು ತಿಂಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ಹೈಕಮಾಂಡ್ ಬಳಿಯೂ ಈ ಬೇಡಿಕೆ ಇಟ್ಟಿದ್ದರು. ಈ ವೇಳೆ ವರಿಷ್ಠರ ಬಳಿ ಶಿವಕುಮಾರ್ ಅವರು ಜಿ.ಪಂ, ತಾ.ಪಂ ಚುನಾವಣೆವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಇದಕ್ಕೆ ವರಿಷ್ಠರೂ ಸಹ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ.
ಇದೀಗ ಸುಪ್ರೀಂ ಕೋರ್ಟ್ ಜಿ.ಪಂ, ತಾ.ಪಂ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆದರೆ ಚುನಾವಣೆಯನ್ನು ಕೆಲ ಕಾಲ ಮುಂದೂಡಲು ಸರ್ಕಾರ ಕಾರಣಗಳನ್ನು ಹುಡುಕುತ್ತಿದೆ. ಬೇಸಿಗೆ ಕಾಲದಲ್ಲಿ ಚುನಾವಣೆ ಎದುರಿಸಿದರೆ ಪಕ್ಷಕ್ಕೆ ನೆಗೆಟಿವ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೇಸಿಗೆ ಮುಗಿದ ಬಳಿಕ ಚುನಾವಣೆ ನಡೆಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಚರ್ಚೆ ಇಲ್ಲ ಎಂದು ಮೂಲಗಳು ತಿಳಿಸಿವೆ.