ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಸ್ಥಿತಿಯಲ್ಲಿ ಗುರುವಾರ ಬೆಳಗಾವಿ ಹೊರವಲಯದಲ್ಲಿ ನಡೆದ ಡಿನ್ನರ್‌ ಸಭೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಭೆಯಲ್ಲಿ ಪಾಲ್ಗೊಂಡ ಬಹುತೇಕರು ಡಿನ್ನರ್‌ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ಸುವರ್ಣ ವಿಧಾನಸೌಧ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಸ್ಥಿತಿಯಲ್ಲಿ ಗುರುವಾರ ಬೆಳಗಾವಿ ಹೊರವಲಯದಲ್ಲಿ ನಡೆದ ಡಿನ್ನರ್‌ ಸಭೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಭೆಯಲ್ಲಿ ಪಾಲ್ಗೊಂಡ ಬಹುತೇಕರು ಡಿನ್ನರ್‌ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ನಾಯಕತ್ವ ಬದಲಾವಣೆ ಚರ್ಚೆ ಸಂದರ್ಭದಲ್ಲೇ ಸಚಿವರು, ಶಾಸಕರು ಡಿನ್ನರ್‌ ಸಭೆಯಲ್ಲಿ ಪಾಲ್ಗೊಂಡಿದ್ದು ಪಕ್ಷದೊಳಗೆ ಸಂಚಲನ ಮೂಡಿಸಿದೆ.

ಸಿಎಂ-ಡಿಸಿಎಂ ಬ್ರೇಕ್‌ ಫಾಸ್ಟ್‌ ಸಭೆ ನಂತರ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ಮತ್ತೆ ಕಾವು ಪಡೆಯುವಂತಾಗಿದೆ. ಅದರ ನಡುವೆಯೇ ಗುರುವಾರ ಬೆಳಗಾವಿ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಸ್ಥಿತಿಯಲ್ಲಿ ಡಿನ್ನರ್‌ ಸಭೆ ನಡೆದಿದೆ. ಸಭೆಯಲ್ಲಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್‌.ಬಿ. ತಿಮ್ಮಾಪೂರ್‌, ಡಾ.ಸುಧಾಕರ್‌, ಡಾ.ಶರಣಪ್ರಕಾಶ್‌ ಪಾಟೀಲ್‌, ಇನ್ನಿತರ ಸಚಿವರು ಸೇರಿ 25ಕ್ಕೂ ಹೆಚ್ಚಿನ ಶಾಸಕರು, ಮಾಜಿ ಶಾಸಕರು, ಕೆಲ ಉದ್ಯಮಿಗಳು ಹಾಗೂ ಕಾಂಗ್ರೆಸ್‌ ಪ್ರಮುಖರು ಪಾಲ್ಗೊಂಡಿದ್ದರು. ಈ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನು, ಡಿನ್ನರ್‌ ಸಭೆಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ ಎಂದು ಸಚಿವರು, ಶಾಸಕರು ಹೇಳುತ್ತಿದ್ದಾರೆ. ಆದರೂ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಾತುಕತೆ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ಒಪ್ಪಬೇಕು ಎಂಬ ಅಂಶ ಪ್ರಸ್ತಾಪಿಸಿದ್ದಾರೆ. ಶೀಘ್ರದಲ್ಲೇ ತಾವು ದೆಹಲಿಗೆ ತೆರಳಬೇಕಾಗಬಹುದು ಎಂದು ಶಾಸಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಊಟಕ್ಕೆ ಕರೆದ್ರೆ ಬೇಡ ಎನ್ನಲಾಗದು-ಡಿಕೆಶಿ:

ಡಿನ್ನರ್‌ ಸಭೆ ಕುರಿತು ಶುಕ್ರವಾರ ಖುದ್ದು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ದಿನಾ ಒಬ್ಬೊಬ್ಬ ಸ್ಥಳೀಯರು, ಕ್ಷೇತ್ರದವರು ಪ್ರೀತಿಯಿಂದ ಊಟಕ್ಕೆ ಕರೆಯುತ್ತಾರೆ. ಅದನ್ನು ಬೇಡ ಎನ್ನಲಾಗದು. ಒಂದೊಂದು ದಿನ, ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಗುರುವಾರ ನಡೆದಿದ್ದು ಯಾವುದೇ ಔತಣಕೂಟವಲ್ಲ. ದೊಡ್ಡಣ್ಣನವರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರು ಕೂಡ. ಅವರು ತಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದರು. ಹೀಗಾಗಿ ನಾನೂ ಸೇರಿ ಒಂದಷ್ಟು ಜನ ಊಟಕ್ಕೆ ಹೋಗಿದ್ದೆವು ಅಷ್ಟೆ. ಯಾವ ಔತಣಕೂಟವೂ ಇಲ್ಲ ಎಂದರು.

ಯಾರು ಕರೆದರೂ ಡಿನ್ನರ್‌ಗೆ ಹೋಗುತ್ತೇವೆ:

ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಡಿನ್ನರ್‌ಗೆ ಯಾರು ಕರೆದರೂ ಹೋಗುತ್ತೇವೆ. ಡಿನ್ನರ್‌ ಸಭೆ ಯಾವಾಗಲೂ ನಡೆಯುತ್ತಿರುತ್ತದೆ. ಇದು ಯಾವುದೇ ನಂಬರ್‌ ಗೇಮ್‌ನ ಡಿನ್ನರ್‌ ಸಭೆಯಲ್ಲ. ಸಿಎಲ್‌ಪಿಯಲ್ಲಿ ಸಿದ್ದರಾಮಯ್ಯ ಅವರು ಊಟ ಹಾಕಿಸಿದ್ದರು. ಊಟಕ್ಕೆ ರಾಜಕೀಯ ಬೆರೆಸುವುದು ಬೇಡ. ಹೈಕಮಾಂಡ್‌ ತೀರ್ಮಾನಕ್ಕೆ ಸಿಎಂ-ಡಿಸಿಎಂ ಬದ್ಧರಾಗಿರುತ್ತಾರೆ ಎಂದರು.

ರಾಜಕೀಯ ಚರ್ಚೆಗೆ ಅವಕಾಶವಿಲ್ಲ:

ಶಾಸಕ ಬಾಲಕೃಷ್ಣ ಮಾತನಾಡಿ, ಊಟಕ್ಕೆ ಯಾರೆಲ್ಲ ಬಂದಿದ್ದರು, ಎಷ್ಟು ಜನ ಬಂದಿದ್ದರು ಎಂದು ತಲೆ ಎಣಿಸಿಲ್ಲ. ಯಾರ ಬಳಿ ಸಹಿಯನ್ನೂ ಪಡೆದಿಲ್ಲ. ಬಹುತೇಕರು ಬಂದಿದ್ದರು. ಅಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆಯಲಿಲ್ಲ. ಈ ಡಿನ್ನರ್‌ಗೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇದರಲ್ಲಿ ಬಲಪ್ರದರ್ಶನ ಏನಿಲ್ಲ. ಅಲ್ಲಿ ಯಾರೂ ಕುಸ್ತಿ ಆಡೋಕೆ ಹೋಗಿರಲಿಲ್ಲ ಎಂದರು.

ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ನಮ್ಮನ್ನು ಊಟಕ್ಕೆ ಕರೆದಿರಲಿಲ್ಲ, ಬದಲಾಗಿ ಬೆಳಗಾವಿ ಸ್ನೇಹಿತರು ಕರೆದಿದ್ದರು, ಅದಕ್ಕಾಗಿ ಹೋಗಿದ್ದೆ. ಒಟ್ಟಿಗೆ ಊಟ ಮಾಡಬಾರದು ಅಂದ್ರೆ ಹೇಗೆ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಇಬ್ಬರೂ ಕೆಲಸ ಮಾಡಿದ್ದಾರೆ. ಉಳಿದದ್ದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವೂ ಬದ್ಧರಾಗಿರುತ್ತೇವೆ. ಅದನ್ನು ಬಿಟ್ಟು ಡಿನ್ನರ್‌ನಲ್ಲಿ ಯಾವ ಬೆಂಬಲ, ನಂಬರ್‌ ಕೂಡ ಇಲ್ಲ ಎಂದರು.----

ಡಿಕೆಶಿ 2028ಕ್ಕೆ ಸಿಎಂ ಆಗುತ್ತಾರೆ: ಜಮೀರ್‌

ಡಿನ್ನರ್‌ ಸಭೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹಮದ್‌ ಖಾನ್‌, ಹೈಕಮಾಂಡ್‌ ನಿರ್ಧಾರವೇ ಅಂತಿಮ. ಪಕ್ಷ ಹಾಕಿದ ಗೆರೆ ನಾನು ದಾಟುವುದಿಲ್ಲ. ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಲಿ. ಈಗಲೇ ಆಗುತ್ತಾರಾ, 2028ಕ್ಕೆ ಆಗುತ್ತಾರಾ ಅದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ನಾನು ಡಿನ್ನರ್‌ಗೆ ಹೋಗಬೇಕಿತ್ತು. ಆದರೆ, ಬಸವರಾಜ ಶಿವಗಂಗಾ, ಆಸೀಫ್‌ ಸೇಠ್‌ ಮತ್ತು ನಾನು ಒಂದು ಕಡೆ ಊಟಕ್ಕೆ ಸೇರಿದ್ದೆವು. ಅದಕ್ಕಾಗಿ ಅಲ್ಲಿಗೆ ಹೋಗಲಾಗಲಿಲ್ಲ ಎಂದರು.

ನಾನೇನು ಮಾತನಾಡಲ್ಲ: ಯತೀಂದ್ರ

5 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಹೇಳಿ ಚರ್ಚೆಗೆ ಕಾರಣರಾಗಿದ್ದ ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ನಿರಾಕರಿಸಿದರು. ನಾನು ಹೇಳುವುದಕ್ಕೆ ಏನೂ ಇಲ್ಲ ಎಂದು ಹೇಳಿದ್ದೇನೆ. ಆದರೂ ನನ್ನನ್ನು ಏಕೆ ಕೇಳುತ್ತೀದ್ದೀರಿ. ನಾನು ಏನನ್ನೂ ಮಾತನಾಡುವುದಿಲ್ಲ ಎಂದರು.

ಡಿನ್ನರ್‌ ಮೀಟಿಂಗ್‌ ವಿರುದ್ಧ ಹೈಕಮಾಂಡ್‌ಗೆ ದೂರು

ಡಿನ್ನರ್‌ ಮೀಟಿಂಗ್‌ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಈ ರೀತಿ ಪ್ರತ್ಯೇಕವಾಗಿ ಡಿನ್ನರ್‌ ಸಭೆಗಳನ್ನು ನಡೆಸುವುದರಿಂದ ಜನ ಮತ್ತು ವಿರೋಧ ಪಕ್ಷದವರಿಗೆ ಆಹಾರ ಆಗುತ್ತೇವೆ. ಮುಖ್ಯಮಂತ್ರಿ ಅವರೂ ನನಗೆ ಊಟಕ್ಕೆ ಕರೆದಿಲ್ಲ, ಉಪಮುಖ್ಯಮಂತ್ರಿ ಅವರೂ ಊಟಕ್ಕೆ ಕರೆದಿಲ್ಲ. ಜತೆಗೆ ಪಕ್ಷಕ್ಕೆ ನಷ್ಟವಾಗುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ನಾನು ದೆಹಲಿಗೆ ಹೋಗುತ್ತೇನೆ. ಹೈಕಮಾಂಡ್‌ಗೆ ವಸ್ತು ಸ್ಥಿತಿ ತಿಳಿಸುತ್ತೇನೆ ಎಂದು ತಿಳಿಸಿದರು.

ಯತೀಂದ್ರಗೆ ಸಾಮಾನ್ಯ ಜ್ಞಾನವಿಲ್ಲ: ಬಾಲಕೃಷ್ಣ

ಯತೀಂದ್ರ ಹೇಳಿಕೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಮಾಗಡಿ ಬಾಲಕೃಷ್ಣ, ಯತೀಂದ್ರ ಹೇಳಿಕೆಗಳಿಂದ ಪಕ್ಷಕ್ಕೆ ಇರಿಸು ಮುರುಸಾಗುತ್ತದೆ. ಯಾರೂ ನಾಯಕತ್ವದ ಪ್ರಶ್ನೆ ಎತ್ತಬಾರದು. ಯತೀಂದ್ರ ಅವರಿಗೆ ಸಾಮಾನ್ಯ ಜ್ಞಾನ ಇರಬೇಕು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಇರುತ್ತದೆ. ಏನೂ ಮಾಡುವುದಕ್ಕಾಗಲ್ಲ. ಎಲ್ಲವೂ ಹೈಕಮಾಂಡ್‌ ನಾಯಕರ ತಲೆಯಲ್ಲಿದೆ. ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಯಾವುದೇ ಕ್ಷಣದಲ್ಲಾದ್ರೂ ಡಿಕೆಶಿ ಸಿಎಂ: ಕದಲೂರು

ನಾವೆಲ್ಲ ಊರು ಬಿಟ್ಟು ಬಂದಿದ್ದೀವಿ. ಅದಕ್ಕಾಗಿ ಡಿನ್ನರ್‌ಗೆ ಎಲ್ಲರೂ ಸೇರಿದ್ದೆವು. ಊಟಕ್ಕೆ ಸೇರೋದೇ ತಪ್ಪಾ? ಡಿಸಿಎಂ ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು, ಅವರು ಆಗುತ್ತಾರೆ. ಯಾವುದೇ ಕ್ಷಣದಲ್ಲಾದರೂ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಶಾಸಕ ಉದಯ ಕದಲೂರು ಮತ್ತೊಮ್ಮೆ ಹೇಳಿದರು.

 8 ಸಚಿವರ ಜತೆ ಸಿದ್ದು ಬ್ರೇಕ್‌ಫಾಸ್ಟ್‌ ಮೀಟಿಂಗ್‌ 

 ಸುವರ್ಣ ವಿಧಾನಸೌಧ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಸ್ಥಿತಿಯಲ್ಲಿ ನಡೆದ ಶಾಸಕರ ಡಿನ್ನರ್‌ ಸಭೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆ ಸಚಿವರೊಂದಿಗೆ ಬ್ರೇಕ್‌ಫಾಸ್ಟ್‌ ಸಭೆ ನಡೆಸಿದರು.

ಬೆಳಗಾವಿ ಹೊರವಲಯದ ಫಾರ್ಮ್‌ಹೌಸ್‌ವೊಂದರಲ್ಲಿ ಗುರುವಾರ ರಾತ್ರಿ ಡಿ.ಕೆ.ಶಿವಕುಮಾರ್‌ ಉಪಸ್ಥಿತಿಯಲ್ಲಿ ಡಿನ್ನರ್‌ ಸಭೆ ನಡೆಸಲಾಗಿತ್ತು. ಅದರಲ್ಲಿ ಹಲವು ಸಚಿವರು, 25ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದರು. ಈ ಡಿನ್ನರ್‌ ಸಭೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆ ಯಾವುದೇ ಮುನ್ಸೂಚನೆ ನೀಡದೆ ಸಚಿವರೊಂದಿಗೆ ಬ್ರೇಕ್‌ಫಾಸ್ಟ್‌ ಮಾಡಿದ್ದಾರೆ.ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌, ಡಾ.ಶರಣಪ್ರಕಾಶ್‌ ಪಾಟೀಲ್‌, ಬೈರತಿ ಸುರೇಶ್‌, ಮಧು ಬಂಗಾರಪ್ಪ ಸೇರಿ 8ಕ್ಕೂ ಹೆಚ್ಚಿನ ಸಚಿವರು ಸಿದ್ದರಾಮಯ್ಯ ಅವರೊಂದಿಗೆ ಉಪಾಹಾರ ಸೇವಿಸಿದ್ದಾರೆ. ಈ ಬ್ರೇಕ್‌ ಫಾಸ್ಟ್‌ ಸಭೆ ಪೂರ್ವನಿಗದಿತ ಅಲ್ಲದಿದ್ದರೂ, ಸಿಎಂ ಮತ್ತು ಸಚಿವರ ನಡುವೆ ಶಾಸಕರ ಡಿನ್ನರ್‌ ಭೇಟಿ ಕುರಿತಂತೆ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.

ಡಿಸಿಎಂ ಡಿನ್ನರ್‌ ಬಗ್ಗೆ ಸಿಎಂಗೆ ಮಾಹಿತಿ:ಡಿ.ಕೆ.ಶಿವಕುಮಾರ್‌ ಡಿನ್ನರ್‌ ಸಭೆಯಲ್ಲಿ ಸಿಎಂ ಆಪ್ತ ಸಚಿವರು ಮತ್ತು ಶಾಸಕರೂ ಪಾಲ್ಗೊಂಡಿದ್ದರು. ಅವರು ಡಿನ್ನರ್‌ಗೆ ತೆರಳುವುದಕ್ಕೆ ಮುನ್ನ ಹಾಗೂ ಡಿನ್ನರ್‌ ಸಭೆ ಬಳಿಕ ಸಿಎಂಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸಿಎಂ ಆಪ್ತರು ಮುಂದಿನವಾರ ಶಾಸಕರಿಗೆ ಡಿನ್ನರ್‌ ಸಭೆ ಏರ್ಪಡಿಸುವ ಸಾಧ್ಯತೆಯಿದೆ.

ಅಧಿವೇಶನ ಬಳಿಕ ಡಿಕೆಗೆಶುಭ ಸುದ್ದಿ: ಇಕ್ಬಾಲ್‌

ಸುವರ್ಣ ವಿಧಾನಸೌಧ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಷ್ಟಪಟ್ಟಿದ್ದಕ್ಕೆ ಫಲ ಸಿಗಲಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಶುಭಸುದ್ದಿ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ. ಇಲ್ಲಿ ಪಕ್ಷದ ವರಿಷ್ಠರ ಮೇಲೆ ಯಾರೂ ಇಲ್ಲ. ಇಲ್ಲಿ ನಂಬರ್ಸ್‌ ಅಲ್ಲ, ವರಿಷ್ಠರ ಅಂತಿಮ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಶಿಸ್ತು ಕಾಪಾಡಬೇಕು. ನಾವು ಹೇಳಿದ್ದನ್ನು ಪಾಲಿಸುವಂತೆ ವರಿಷ್ಠರು ಈಗಾಗಲೇ ಸೂಚಿಸಿದ್ದಾರೆ. ನಾವೇ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ ಎಂದರು.---ಸಿಎಂ ಅವಧಿಗೆ ಯಾವುದೇ

ಗಡುವು ಕೊಟ್ಟಿಲ್ಲ: ಜಾರ್ಜ್‌

ಬೆಳಗಾವಿ: ಮುಖ್ಯಮಂತ್ರಿ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಯಾವುದೇ ಗಡುವು ನೀಡಿಲ್ಲ. ಎಐಸಿಸಿ ವೀಕ್ಷಕರ ಮುಂದೆಯೇ ಸಿಎಂ ಆಯ್ಕೆ ಮಾಡಲಾಗಿದೆ. ಯಾವುದೇ ಗಡುವು ನೀಡಿಲ್ಲ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಹೇಳಿದರು. ಕೆ.ಜೆ.ಜಾರ್ಜ್‌ ನೀಡಿರುವ ಹೇಳಿಕೆಯಿಂದ ಸಿಎಂ ಬದಲಾವಣೆ ವಿಚಾರದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

 2026ರಲ್ಲಿ ಡಿನ್ನರ್‌ ಪಾರ್ಟಿಹೆಚ್ಚಾಗ್ತವೆ: ಜಾರಕಿಹೊಳಿ

ಬೆಳಗಾವಿ: ದಿನನಿತ್ಯ ಪಾರ್ಟಿಗಳು ನಡೆಯುತ್ತವೆ. ಶಾಸಕರು ಗುಂಪು ಗುಂಪಾಗಿ ಸೇರುತ್ತಾರೆ, ಒಟ್ಟಾಗಿ ಊಟ ಮಾಡುತ್ತಾರೆ. ಮುಂದಿನ ವರ್ಷ ಇನ್ನೂ ಹೆಚ್ಚು ಡಿನ್ನರ್ ಪಾರ್ಟಿಗಳಾಗಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕರು ಸಿಎಂ ಮತ್ತು ಡಿಸಿಎಂ ಪರ ಹೇಳಿಕೆ ನೀಡುತ್ತಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. 7 ಅಥವಾ 8 ಗಂಟೆಗೆ ಅಧಿವೇಶನ ಇರಲ್ಲ. ಆಗ ಒಟ್ಟಾಗಿ ಕೂಡಿದಾಗ ಮಾತನಾಡುತ್ತಾರೆ. ಅಧಿವೇಶನ ಮುಗಿದ ಬಳಿಕ ಡಿನ್ನರ್ ಪಾರ್ಟಿಗಳು ನಡೆಯುತ್ತವಷ್ಟೇ ಎಂದರು 

ನಮ್ಮದೂ ದಿನವೂ ಔತಣಕೂಟ ನಡೆಯುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಕೊಡಿ ಎನ್ನುವುದು ಶಾಸಕರ ಆಗ್ರಹವಾಗಿದೆ. ಪ್ರತ್ಯೇಕ ರಾಜ್ಯ ಕೂಗು ಎಂಬುದಕ್ಕಿಂತ ನಮಗೆ ಎಷ್ಟು ಶಕ್ತಿಯಿದೆ ಅಷ್ಟು ಅಭಿವೃದ್ಧಿ ಮಾಡಬೇಕು. ಫ್ಲೈಓವರ್, ರಸ್ತೆ, ನೀರಾವರಿ ಮೂಲಕ ಕೆರೆ ತುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.