ಸಾರಾಂಶ
‘ಸದ್ಯದ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ. ಹಾಗಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲ ಎಂದಲ್ಲ’ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರು : ‘ಸದ್ಯದ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲವಿದೆ. ಹಾಗಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲ ಎಂದಲ್ಲ’ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಾನು ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳಿದ್ದನ್ನು ಯಾಕೆ ಪದೇ ಪದೇ ಕೇಳುತ್ತಿದ್ದೀರಿ. ಅವರೇ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರಲ್ಲ. ನಮ್ಮಲ್ಲಿ ಏನೇ ತೀರ್ಮಾನ ಮಾಡಿದರೂ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ತೀರ್ಮಾನವು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬವಿಲ್ಲ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಅವರು ಯಾವ ಪರಿಸ್ಥಿತಿಯಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಹೆಚ್ಚಿದೆ. ಹಾಗಂತ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲ ಎಂದಲ್ಲ. ನಮ್ಮಲ್ಲಿ ಯಾವ ಕದನವೂ ನಡೆಯುತ್ತಿಲ್ಲ. ಹೀಗಾಗಿ ಈ ಚರ್ಚೆಯೇ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುರ್ಜೇವಾಲಾ ಅವರು ಸಚಿವರ ಮೌಲ್ಯಮಾಪನ ಮಾಡುತ್ತಾರಂತೆ ಎಂಬ ಪ್ರಶ್ನೆಗೆ, ಮೌಲ್ಯಮಾಪನದ ಬಗ್ಗೆ ಗೊತ್ತಿಲ್ಲ. ಶಾಸಕರು ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ. ಆ ಬಗ್ಗೆ ಸಚಿವರಿಗೆ ಮಾಹಿತಿ ನೀಡಬಹುದು. ಆದರೆ ಅಂತಿಮವಾಗಿ ಸುರ್ಜೇವಾಲಾ ಅವರು ದುಡ್ಡು ಕೊಡುವವರು ಅಲ್ಲ. ಮುಖ್ಯಮಂತ್ರಿಗಳೇ ಹಣ ಕೊಡಬೇಕು. ಹೀಗಾಗಿ ಇದರಲ್ಲಿ ಹೈಕಮಾಂಡ್ ಸರ್ಕಾರದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ ಎಂಬ ಆರೋಪ ಸರಿಯಲ್ಲ. ಇದು ಎಲ್ಲಾ ಪಕ್ಷಗಳಲ್ಲಿಯೂ ಇರುವ ವ್ಯವಸ್ಥೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ಕಾರಣ ಸಹಜವಾಗಿಯೇ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ
ಹಾಗೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಹೆಚ್ಚಿನ ಬೆಂಬಲ ಇಲ್ಲವೆಂದಲ್ಲ ಎಂದ ಸಚಿವ ಎಂಬಿಪಾ
ಐದು ವರ್ಷ ನಾನೇ ಸಿಎಂ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ ಬಳಿಕ ಆ ಕುರಿತ ಚರ್ಚೆ ಅನಗತ್ಯ
ನಮ್ಮಲ್ಲಿ ಎಲ್ಲಾ ತೀರ್ಮಾನ ಹೈಕಮಾಂಡ್ ಮಾಡುತ್ತೆ. ಅದರ ನಿರ್ಧಾರ ಸಿಎಂ, ಡಿಸಿಎಂ,ನನಗೂ ಅನ್ವಯ
ಇತ್ತೀಚಿನ ದೆಹಲಿ ಪ್ರವಾಸದ ವೇಳೆ ಡಿ.ಕೆ.ಶಿವಕುಮಾರ್‌ಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ ಎಂದಿದ್ದ ಸಿಎಂ