ರಾಜಕೀಯವಾಗಿ ನನಗೆ ಡಿಕೆಶಿ ವಿಷ ಹಾಕಿದ್ರು: ಎಚ್‌ಡಿಕೆ

| Published : Mar 20 2024, 01:23 AM IST / Updated: Mar 20 2024, 08:01 AM IST

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜಕೀಯ ಜೀವನ ಮುಗಿಸಲು ಯತ್ನಿಸಿದ್ದಲ್ಲದೇ ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರ ಜಾತ್ಯತೀತ ನಿಲುವಿಗೆ ಕೊಳ್ಳಿ ಇಟ್ಟರು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜಕೀಯ ಜೀವನ ಮುಗಿಸಲು ಯತ್ನಿಸಿದ್ದಲ್ಲದೇ ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರ ಜಾತ್ಯತೀತ ನಿಲುವಿಗೆ ಕೊಳ್ಳಿ ಇಟ್ಟರು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಗಳವಾರ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯವಾಗಿ ಶಿವಕುಮಾರ್‌ ನನಗೆ ವಿಷ ಹಾಕಿದ್ದಾರೆ. ರಾಜಕೀಯವಾಗಿ ಮುಗಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಈಗ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಅನುಕಂಪ ನನಗೆ ಬೇಕಾಗಿಲ್ಲ ಎಂದರು.ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ಸೇ ಕಾರಣ. ನಮ್ಮನ್ನು ಬಿಜೆಪಿ ಬಿ ಟೀಮ್ ಎಂದು ಕರೆದರು. ರಾಜ್ಯದ ಜನರು ಕಾಂಗ್ರೆಸ್‌ ಅನ್ನು ತಿರಸ್ಕರಿಸಿದಾಗ ನಮ್ಮ ಬಾಗಿಲಿಗೆ ಬಂದರು. 

ನಮ್ಮ ಜೊತೆ ಮೈತ್ರಿ ಮಾಡಿಕೊಂಡು ನಮ್ಮ ಪಕ್ಷವನ್ನು ನಾಶ ಮಾಡಲು ಹೋಗಿದ್ದರು. ನನ್ನ ಮುಗಿಸಲು ಹಂತ ಹಂತವಾಗಿ ಶಿವಕುಮಾರ್‌ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೊರಗಡೆ ನಮ್ಮನ್ನು ಉಳಿಸುವ ರೀತಿ ನಾಟಕ ಮಾಡಿ, ಟ್ರಬಲ್ ಶೂಟರ್ ಎಂದು ದುಡ್ಡು ಕೊಟ್ಟು ಕರೆಸಿಕೊಂಡರು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೋಗಿದ್ದರು. ಈಗಲೂ ನಮ್ಮ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಸಹೋದರನ ಗೆಲುವು ಯಾರಿಂದ ಆಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. 

ನಾವು ಇಲ್ಲ ಅಂದಿದ್ದರೆ ಅವರ ಸಹೋದರ ಸೋಲುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಟ್ರಬಲ್ ಶೂಟರ್ ನಮಗಾಗಿ ತುಂಬಾ ಶ್ರಮ ಪಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಪಕ್ಷದ ನಿಖಿಲ್ ಕುಮಾರಸ್ವಾಮಿ ಗೆಲುವಿಗೂ ಟ್ರಬಲ್‌ ಶೂಟರ್‌ ತುಂಬಾ ಶ್ರಮ ವಹಿಸಿದ್ದಾರೆ.

ಕಾಂಗ್ರೆಸ್‌ - ಜೆಡಿಎಸ್‌ ನಡುವಿನ ಹೊಂದಾಣಿಕೆಗೆ ಮೂಲ ಕಾರಣ ಅವರೇ. ನಂತರ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.