ಸಾರಾಂಶ
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದನ್ನು ಸಹಿಸದೆ ಅವಧಿಗೆ ಮುನ್ನವೇ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಮತ್ತು ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ರಾಜಕೀಯ ಜ್ಯೋತಿಷಿಯೇ ಆಗಿದ್ದರೆ ಭವಿಷ್ಯ ಹೇಳುತ್ತಲೇ ಇರಲಿ.
ಮದ್ದೂರು : ಅವಧಿಗೆ ಮುನ್ನ ಚುನಾವಣೆ ನಡೆಯುತ್ತದೆ ಎಂದಿರುವ ಕುಮಾರಸ್ವಾಮಿ ಜ್ಯೋತಿಷ್ಯಾನೂ ಹೇಳ್ತಾರಾ, ಅವರು ಜ್ಯೋತಿಷ್ಯ ಹೇಳೋದಾದರೆ ಹೇಳಲಿ, ನಮ್ಮ ಜ್ಯೋತಿಷ್ಯಾನಾ ನಾವೂ ಹೇಳುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಾಗಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪೂರ್ಣ ಪ್ರಮಾಣದ ಸರ್ಕಾರ ಮಾಡಿಲ್ಲ. ಅವಧಿ ಪೂರ್ಣಗೊಳಿಸಿದ ಅನುಭವವೂ ಅವರಿಗಿಲ್ಲ. ಅದಕ್ಕೆ ಆ ರೀತಿ ಮಾತನಾಡುತ್ತಾರೆ ಎಂದು ಕುಟುಕಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರೂ, ಅವರಿಂದ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ. ಅದಕ್ಕೆ ಅವರು ರೆಡಿಯಾಗೂ ಇರಲಿಲ್ಲ. ಈಗ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದನ್ನು ಸಹಿಸದೆ ಅವಧಿಗೆ ಮುನ್ನವೇ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಮತ್ತು ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ರಾಜಕೀಯ ಜ್ಯೋತಿಷಿಯೇ ಆಗಿದ್ದರೆ ಭವಿಷ್ಯ ಹೇಳುತ್ತಲೇ ಇರಲಿ. ನಮ್ಮಲ್ಲೂ ಒಳ್ಳೆ ಜ್ಯೋತಿಷ್ಯ ಹೇಳುವವರಿದ್ದಾರೆ. ಅಲ್ಲಿಗೂ ಹೋಗಿ ಕೇಳಿ ಎಂದು ಹೇಳುತ್ತೇನಂಬುದಾಗಿ ತಿಳಿಸಿದರು.
ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪವಾಗುತ್ತಿರುವ ಬಗ್ಗೆ ಕೇಳಿದಾಗ ಅದು ಅವರ ಪಕ್ಷದ ತೀರ್ಮಾನ. ಏನಾದರೂ ಮಾಡಿಕೊಳ್ಳಲಿ, ಕುಮಾರಸ್ವಾಮಿ ಸಂಸದರಾಗುವವರೆಗೆ ಆ ಯೋಗೇಶ್ವರ್ ಬೇಕಾಗಿತ್ತು. ಈಗ ಬೇಕಿಲ್ಲ. ಅವರು ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದಷ್ಟೇ ಮುಖ್ಯ ಎಂದರಲ್ಲದೇ, ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅಥವಾ ಅಚ್ಚರಿ ವ್ಯಕ್ತಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ನಾಯಕರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡಲಿದ್ದಾರೆ ಎಂದರು.
ಗೃಹ ಸಚಿವ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಬಾರದೇ, ಅದರಲ್ಲಿ ತಪ್ಪೇನು?, ಯಾರು ಯಾರನ್ನು, ಯಾವಾಗ ಬೇಕಾದರೂ ಭೇಟಿ ಮಾಡಬಹುದು. ಭೇಟಿ ಮಾಡಬಾರದು ಎಂದು ನಿಗ ಮಾಡಲಾಗುವುದೇ ಎಂದು ಪ್ರಶ್ನಿಸಿದರು.
ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ, ಗ್ರಾಮ ಪಂಚಾಯ್ತಿ ಸದಸ್ಯ ಕುಮಾರ್ ಕೊಪ್ಪ, ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ರಾಮಚಂದ್ರಘ, ತಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಜರಿದ್ದರು.