ಸಾರಾಂಶ
ವಾಷಿಂಗ್ಟನ್ : ತೆರಿಗೆ ವಿವಾದ ಪರಿಹಾರ ಆಗುವವರೆಗೂ ಭಾರತದ ಜತೆಗೆ ವ್ಯಾಪಾರ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆ.25ರಂದು ಭಾರತ-ಅಮೆರಿಕ ಮುಂದಿನ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುವುದೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‘ಈಗಾಗಲೇ ಅಮೆರಿಕವು ಶೇ.50ರಷ್ಟು ತೆರಿಗೆ ಹಾಕಿದೆ. ಇನ್ನಾದರೂ ಭಾರತದ ಜತೆಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ನಡೆಯಲಿದೆಯಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತೆರಿಗೆಗೆ ಸಂಬಂಧಿಸಿದ ವಿವಾದ ಬಗೆಹರಿಯುವವರೆಗೂ ಯಾವುದೇ ಮಾತುಕತೆ ಇಲ್ಲ’ ಎಂದು ತಿಳಿಸಿದರು.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರವಷ್ಟೇ ಅಮೆರಿಕ ಸರ್ಕಾರವು ಭಾರತದ ಮೇಲೆ ಈಗಾಗಲೇ ವಿಧಿಸಿರುವ ಶೇ.25ರಷ್ಟು ತೆರಿಗೆಯ ಜತೆಗೆ ಹೆಚ್ಚುವರಿ ಶೇ.25 ಮೇಲ್ತೆರಿಗೆ ಹಾಕಿದೆ. 21 ದಿನಗಳ ಬಳಿಕ ಈ ಮೇಲ್ತೆರಿಗೆ ಜಾರಿಗೆ ಬರಲಿದೆ.
ಈಗಾಗಲೇ ಪ್ರಧಾನಿ ಮೋದಿ ಅವರು, ‘ರೈತರು, ಮೀನುಗಾರರು ಮತ್ತು ಹೈನುಗಾರಿಕೆ ವಿಚಾರದಲ್ಲಿ ದೇಶ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಇದಕ್ಕಾಗಿ ದುಬಾರಿ ಬೆಲೆ ತೆರಬೇಕಿದೆ ಎಂಬುದು ಗೊತ್ತಿದೆ. ನಾನು ಹಾಗೂ ಭಾರತ ಎರಡೂ ಇದಕ್ಕೆ ಸಿದ್ಧವಾಗಿದ್ದೇವೆ’ ಎಂದು ಹೇಳಿದ್ದಾರೆ.
ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಗೆ ಭಾರತ ಬ್ರೇಕ್?
ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳಿಗೆ ಶೇ.50ರಷ್ಟು ತೆರಿಗೆ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಬೆನ್ನಲ್ಲೇ, ಇದೀಗ ಅಮೆರಿಕದಿಂದ ಹೊಸದಾಗಿ ಶಸ್ತ್ರಾಸ್ತ್ರ, ಕಣ್ಗಾವಲು ವಿಮಾನಗಳ ಖರೀದಿಯನ್ನು ಭಾರತ ತಡೆಹಿಡಿದಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮೂಲಕ ಅಮೆರಿಕದ ತೆರಿಗೆ ದಾಳಿಗೆ ಭಾರತ ಮೊದಲ ಬಾರಿಗೆ ಸಣ್ಣದೊಂದು ತಿರುಗೇಟು ನೀಡುವ ಸುಳಿವು ನೀಡಿದೆ.ಅಮೆರಿಕದ ಸ್ಟ್ರೈಕರ್ ಯುದ್ಧ ವಾಹನಗಳು, ಕ್ಷಿಪಣಿಗಳು ಮತ್ತು ಬೋಯಿಂಗ್‌ನ ಸರ್ವೇಕ್ಷಣಾ ವಿಮಾನಗಳನ್ನು ಖರೀದಿಸುವ ಕುರಿತು ಅಮೆರಿಕ ಜತೆಗೆ ಮಾತುಕತೆ ನಡೆಯುತ್ತಿತ್ತು. ಈ ಶಸ್ತ್ರಾಸ್ತ್ರಗಳ ಖರೀದಿ ಘೋಷಣೆ ವಿಚಾರವಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂದಿನ ವಾರಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಆ ಭೇಟಿ ಇದೀಗ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿ ಸುಳ್ಳು- ಸರ್ಕಾರ:ಆದರೆ ಈ ವರದಿಯ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ವರದಿ. ಇಂಥ ಯಾವುದೇ ವಿದ್ಯಮಾನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತವು ಅಮೆರಿಕದ ಬೋಯಿಂಗ್ ಕಂಪನಿಯಿಂದ 31,500 ಕೋಟಿ ರು. ಮೌಲ್ಯದ ಆರು ಕಣ್ಗಾವಲು ವಿಮಾನ ಸೇರಿ ಹಲವು ಶಸ್ತ್ರಾಸ್ತಗಳ ಖರೀದಿಗೆ ಮುಂದಾಗಿತ್ತು.
ಟ್ರಂಪ್ ಜತೆ ವ್ಯವಹರಿಸುವ ಗುಟ್ಟು ಹೇಳ್ತಾರಂತೆ ಇಸ್ರೇಲ್ ಪ್ರಧಾನಿ!
ಟೆಲ್‌ಅವೀವ್: ಅಮೆರಿಕ ಮಾತ್ರವಲ್ಲದೆ ಇಡೀ ವಿಶ್ವ ನಾಯಕರ ಕಣ್ಣಿಗೆ ವಿಕ್ಷಿಪ್ತ ವ್ಯಕ್ತಿತ್ವವಾಗಿ ಗೋಚರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ವ್ಯವಹರಿಸುವುದು ಹೇಗೆನ್ನುವ ಗುಟ್ಟನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ಮೋದಿ ಅವರಿಗೆ ಹೇಳಿಕೊಡಲಿದ್ದಾರಂತೆ!ಹೌದು.. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ನೆತನ್ಯಾಹು, ‘ಮೋದಿ ಮತ್ತು ಟ್ರಂಪ್ ಇಬ್ಬರೂ ನನ್ನ ಆತ್ಮೀಯ ಗೆಳೆಯರು. ಟ್ರಂಪ್ ಜತೆಗೆ ವ್ಯವಹರಿಸುವ ವಿಚಾರವಾಗಿ ಮೋದಿ ಅವರಿಗೆ ಸಲಹೆ ನೀಡಲಿದ್ದೇನೆ. ಆದರೆ ಇದು ಖಾಸಗಿ ಸಲಹೆ. ಸದ್ಯದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ’ ಎಂದರು.
‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ತಳಹದಿ ಭದ್ರವಾಗಿದೆ ಎಂದ ಅವರು, ತೆರಿಗೆ ವಿವಾದವನ್ನು ಬಗೆಹರಿಸಿಕೊಳ್ಳುವುದು ಭಾರತ ಮತ್ತು ಅಮೆರಿಕ ಎರಡು ದೇಶಗಳ ಹಿತಾಸಕ್ತಿಯಿಂದ ಒಳಿತು. ಇದು ಇಸ್ರೇಲ್ ಪಾಲಿಗೂ ಒಳ್ಳೆಯದು. ಯಾಕೆಂದರೆ ಎರಡೂ ದೇಶಗಳು ನಮ್ಮ ಒಳ್ಳೆಯ ಗೆಳೆಯರು’ ಎಂದು ಅವರು ತಿಳಿಸಿದರು.
ಟ್ರಂಪ್ ನಡೆಗೆ ಅಮೆರಿಕದಲ್ಲೇ ಅತೃಪ್ತಿ: ಸಂಸದ ಮೀಕ್ಸ್ ಆಕ್ರೋಶ
ಪಿಟಿಐ ನ್ಯೂಯಾರ್ಕ್‌ಭಾರತದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ಸುಂಕ ಹೇರಿದ್ದನ್ನು ಅಮೆರಿಕದ ಸಂಸದರೊಬ್ಬರು ವಿರೋಧಿಸಿದ್ದು, ಇದರಿಂದ ಭಾರತ-ಅಮೆರಿಕ ನಡುವಿನ ದಶಕಗಳ ಉತ್ತಮ ಸಂಬಂಧ ಹಾಳಾಗಬಹುದು ಎಂಬ ಆತಂಕ ಹೊರಹಾಕಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಆತಂಕ ವ್ಯಕ್ತಪಡಿಸಿರುವ ಸಂಸದ ಗ್ರೆಗೋರಿ ಮೀಕ್ಸ್, ‘ದಶಕಗಳಿಂದ ಜೋಪಾನವಾಗಿ ಕಟ್ಟಿಕೊಂಡು ಬಂದಿರುವ ಭಾರತ-ಅಮೆರಿಕ ನಡುವಿನ ಸಂಬಂಧವು ಟ್ರಂಪ್ ತೆರಿಗೆಯಿಂದ ಆತಂಕಕ್ಕೆ ತುತ್ತಾಗಿದೆ. ಟ್ರಂಪ್ ರೀತಿಯ ನಿರ್ಧಾರಗಳಿಂದ ಉತ್ತಮ ಸಂಬಂಧವನ್ನು ಹಾಳುಗೆಡವಬಾರದು. ಏನೇ ಅಸಮಾಧಾನ, ವಿಷಯಗಳಿದ್ದರೂ ಮಾತುಕತೆ ಮೂಲಕ ಗೌರವಯುತವಾಗಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.