ಜನರಿಗೆ ಕಾಂಗ್ರೆಸ್‌ನಿಂದ ಖಾಲಿ ಚಿಪ್ಪು: ಸುಧಾಕರ್‌

| Published : Apr 24 2024, 02:32 AM IST

ಜನರಿಗೆ ಕಾಂಗ್ರೆಸ್‌ನಿಂದ ಖಾಲಿ ಚಿಪ್ಪು: ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ, ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನರಿಗೆ ಯೋಜನೆಗಳನ್ನು ನೀಡದೆ ಕೇವಲ ಖಾಲಿ ಚಿಪ್ಪು ನೀಡಿದೆ ಎಂದು ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ, ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನರಿಗೆ ಯೋಜನೆಗಳನ್ನು ನೀಡದೆ ಕೇವಲ ಖಾಲಿ ಚಿಪ್ಪು ನೀಡಿದೆ ಎಂದು ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 11 ತಿಂಗಳ ಆಡಳಿತದಲ್ಲಿ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಈ ಗ್ಯಾರಂಟಿಗಳನ್ನು ಕೂಡ ಸಮರ್ಪಕವಾಗಿ ಜಾರಿ ಮಾಡಿಲ್ಲ. ಅಲ್ಲದೆ, ಈ ಯೋಜನೆಗಳಿಗಾಗಿ ಕೋಟ್ಯಂತರ ರುಪಾಯಿ ಹಣ ಮೀಸಲಿಟ್ಟು, ಖಜಾನೆ ಖಾಲಿ ಮಾಡಿ ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದು ರೂಪಾಯಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ದೂರಿದರು.

ಬರಗಾಲದಿಂದ ತತ್ತರ:

ಜನರು ಬರಗಾಲದ ಬವಣೆಯಿಂದ ತತ್ತರಿಸುತ್ತಿದ್ದರೆ ಕಾಂಗ್ರೆಸ್‌ ಸರ್ಕಾರ ನೀರುಳಿಸಲು ಅಥವಾ ರೈತರಿಗೆ ಪರಿಹಾರ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಕಾವೇರಿ ನೀರನ್ನು ಉಳಿಸುವುದನ್ನು ಬಿಟ್ಟು ತಮಿಳುನಾಡಿಗೆ ಹರಿಸಲಾಗಿದೆ. ಬಯಲುಸೀಮೆಯಲ್ಲಿ ಎತ್ತಿನಹೊಳೆ ಯೋಜನೆಯನ್ನಾದರೂ ಪೂರ್ಣಗೊಳಿಸಿ ನೀರು ನೀಡಬೇಕಿತ್ತು. ಕೆಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ ಯೋಜನೆಯಡಿ ತೃತೀಯ ಹಂತದ ಸಂಸ್ಕರಣೆಯ ನೀರಿನಿಂದ ಕೆರೆಗಳನ್ನು ತುಂಬಿಸಬೇಕಿತ್ತು. ಇವ್ಯಾವುದೇ ಕೆಲಸಗಳನ್ನು ಮಾಡದೆ ಕೇವಲ ಗ್ಯಾರಂಟಿ ಜಪ ಮಾಡಲಾಗಿದೆ. ಇದರಿಂದಾಗಿ ಜನರು ಬರಗಾಲದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಒಂದು ರುಪಾಯಿ ಪರಿಹಾರ ನೀಡದ ಸರ್ಕಾರ ಎಲ್ಲಕ್ಕೂ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ಮಾಡಿದೆ ಎಂದು ಡಾ। ಕೆ.ಸುಧಾಕರ್‌ ಹೇಳಿದರು.

ಈ ಹಿಂದೆ ರಾಜ್ಯ ಸರ್ಕಾರದಿಂದ ಕಿಸಾನ್‌ ಸಮ್ಮಾನ್‌ನಡಿ ₹4,000 ನೀಡಲಾಗುತ್ತಿತ್ತು. ಈ ಹಣವನ್ನು ನೀಡಿದ್ದರೆ ರೈತರಿಗೆ ಈ ಬರಗಾಲದಲ್ಲಿ ಸ್ವಲ್ಪವಾದರೂ ನೆರವಾಗುತ್ತಿತ್ತು. ಅದನ್ನು ಕೂಡ ಸ್ಥಗಿತಗೊಳಿಸಿ ವಂಚಿಸಲಾಗಿದೆ. ದಲಿತರಿಗೆ ಸೇರಬೇಕಿದ್ದ ₹11 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಸಿ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಮಾಡಿದಂತಹ ಅನ್ಯಾಯವನ್ನೇ ಬೇರೆ ರೀತಿಯಲ್ಲಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಿದ್ದರೆ, ಅದನ್ನೂ ಕೂಡ ಕಿತ್ತುಕೊಂಡು ಬಸ್‌ಗಳಿಲ್ಲದೆ ವಿದ್ಯಾರ್ಥಿಗಳನ್ನು ರಸ್ತೆ ಬದಿ ನಿಲ್ಲಿಸಲಾಗಿದೆ ಎಂದು ದೂರಿದರು.

‘ಕಾಂಗ್ರೆಸ್‌ ಚಿಪ್ಪು ಕೊಡಿ’

ಸುಸ್ಥಿರ ಆಡಳಿತ ನೀಡದೆ ದುರಾಡಳಿತ ಮಾಡುತ್ತಿರುವ ಕಾಂಗ್ರೆಸ್‌ಗೆ ಈ ಲೋಕಸಭೆ ಚುನಾವಣೆಯಲ್ಲಿ ಮತದಾರರು ಚಿಪ್ಪು ನೀಡಬೇಕು. ಈ ಮೂಲಕವೇ ಕಾಂಗ್ರೆಸ್‌ ನಾಯಕರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಡಾ। ಕೆ.ಸುಧಾಕರ್‌ ಹೇಳಿದ್ದಾರೆ.

ವಿದ್ಯುತ್‌ ದರ ಹೆಚ್ಚಳ, ಆಸ್ತಿ ತೆರಿಗೆ ಏರಿಕೆ, ಮಾರ್ಗಸೂಚಿ ದರ ಏರಿಕೆ, ಕಂದಾಯ ಪ್ರಮಾಣ ಪತ್ರಗಳ ಶುಲ್ಕ ಹೆಚ್ಚಳ ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ಕೊಡುವುದಕ್ಕಿಂತ ಜನರಿಂದ ದೋಚುವುದನ್ನೇ ಕೆಲಸ ಮಾಡಿಕೊಂಡಿದೆ.

-ಡಾ। ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಎನ್‌ಡಿಎ ಅಭ್ಯರ್ಥಿ.